ಸೋಮವಾರ, ಆಗಸ್ಟ್ 30, 2010

ದಾನಿ ದೀನರ ಋಣಾನುಬಂಧ

ದಾನಿ ದೀನರ ಋಣಾನುಬಂಧ
ಕೆ. ಆರ್. ಎಸ್. ಮೂರ್ತಿ

ಸಾಲ ಸೋಲ ಕೊಟ್ಟೊಡನೆ ಅಂಟುವುದು ತಲೆ ಶೂಲೆ;
ಕೊಟ್ಟದ್ದು ಕೈ ಬಿಟ್ಟು ಹೋಯಿತಲ್ಲಾ ಎಂದು ವ್ಯಥೆ;
ಬಡ್ಡಿಯ ಆಸೆ ಒಂದು ಕಡೆ, ಬಡ್ಡಿಯು ದೊಡ್ಡ ಗುಡ್ದೆಯಾದೀತೆಂದು;
ಅಸಲೇ ಪಲಾಯನವಾದೀತೆಂದು ಭಯದ ಚಳಿಯ ನಡುಕ.

ಸಾಲಕ್ಕೆ ನೀಡಿದ ಕೈಗೆ ತಗುಲುವುದು ಋಣ ಭಾರದ ಕಬ್ಬಿಣದ ಬೇಡಿ;
ಬಡ್ಡಿಗೆ ಬಡ್ಡಿಗಳ ಸಂತಾನ ಬೆಳೆದು ನೊಗವು ಬಿಗಿಯಾಗುತ್ತಾ,
ನೇಣಾಗಿ ಹೋಗಿ ಗಂಟಲಿನಲ್ಲಿ ಉಸಿರೇ ಕಟ್ಟಿ ಹೋಗುವ ಹೆದರಿಕೆ.

ಕೊಟ್ಟರೆ ಮನಸಾರೆ ಕೊಟ್ಟುಬಿಡು ಕೈ ನೀಡಿ ದಾನವನು;
ನಿನ್ನ ಬೆನ್ನು ಹತ್ತುವಳು ಪುಣ್ಯದ ಲಾವಣ್ಯ ಸುಂದರಿ!

ದೀನನಾಗಿ ಬಳಲುತಿರುವಾಗ, ಪಡೆ ದಾನದ ಪುಣ್ಯವನು;
ಈ ತರಹದ ಪುಣ್ಯದ ಋಣವನ್ನು ಅತಿ ಬೇಗ ತೀರಿಸಿಕೊ;
ನಿಜ ಪುಣ್ಯದ ಕಾಲ ಬಂದೊಡನೆ ಕಾತರದಿ ಕೈ ಬಿಚ್ಚಿ ಕೊಟ್ಟುಬಿಡು,
ಬಡ್ಡಿಗೆ ಬಡ್ಡಿ ಕೂಡಿಸಿ ದೀನನೋರ್ವನ ಕಂಡೊಡನೆ.

ದಾನಿ ದೀನನ ಹುಡುಕಿ ಮಾಡುವುದೇ ತೀರ್ಥಯಾತ್ರೆ;
ಕೊಡುವುದೂ, ಬೇಡುವುದೂ ಒಂದು ರೀತಿಯ ಹಸ್ತ ಲಾಘವೇ!
ಬೇಡುವ ಕೈ ಕೊಡುವ ಕೈಯಾಗುವ ಕಂಕಣ ಧಾರಣ;
ಋಣವು ಪುಣ್ಯವಾಗುವ, ಕಬ್ಬಿಣವು ಸುವರ್ಣವಾಗುವ ರಸಾನುವರ್ತನೆ;
ದಾನಿ, ದೀನರದು ವಿಭಿನ್ನ ತರಹದ ಪೂರ್ವ ಜನ್ಮದ ಸಂಬಧ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ