ಶನಿವಾರ, ಆಗಸ್ಟ್ 7, 2010

ನಿನ್ನೆಯ ಸೆರೆಮನೆ

ನಿನ್ನೆಯ ಸೆರೆಮನೆ
ಕೆ. ಆರ್. ಎಸ್. ಮೂರ್ತಿ

ನಿನ್ನೆಗೆ ಹೊಗಾಯಿತು; ಮೊನ್ನೆಯ ಹಂಬಲು ಹಂಪಲು ಹಣ್ಣೆಲ್ಲ ತಿಂದಾಯಿತು.
ಹಿಂದಿನ ಹಳಸಿದ ಹುಳಿಯನ್ನವನ್ನು ಕಬಳಿಸುತಲಿ ತಿಂದು ವಾಕರಿಸಿಯಾಯಿತು.

ಭೂತದ ಕನ್ನಡಿಯಲ್ಲಿ ಹುದುಗಿ ಹೋದ ಕಾಂಚನಕ್ಕೆಲ್ಲ ತೀರದಷ್ಟು ಆಶಿಸಿ
ಮೊನ್ನೆಯ ಸೊನ್ನೆಗೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು, ಕೈಗೆಟುಕದ ಕನ್ನೆಯನ್ನು ಮುದ್ದಿಸಿ

ಕನಸಿನಲಿ ಕಲ್ಪನೆಯ ಅರಮನೆ ಕಟ್ಟಿ, ದಟ್ಟ ಮೀಸೆಯನೇ ಹೊಸೆದು ಜರೆದಾಯ್ತು
ಮೈಮೇಲೆ ನೂರಾರು ನೀರೆಯರ ಕೂರಿಸಿ, ಸಾವಿರ ವೀರ್ಯ ಪಾತದಲಿ ಮೆರೆದಾಯ್ತು

ರಾವಣನ ಸಿಂಹಾಸನದಲಿ ಕೆಲ ವರುಷ, ದುಶ್ಯಾಸನನ ಆಸೆಯಲಿ ಮೆರೆಯುತ ಮಿಕ್ಕೆಲ್ಲ
ನಿಯೋಗಿ ಭೋಗದಲಿ ಭೂಮಿಯನು ಸುತ್ತಲೆದು, ಅಂದಾಯ್ತು "ಆ ಕಂದನು ನನ್ನದಲ್ಲ"

ಕಾವಿಯೊಳಗೆ ಕಳ್ಳ ಸ್ವಾಮಿಯಾಗಿ ನೀನ್ನೆಲ್ಲರ ಹೊನ್ನನು ಹೊತ್ತು, ಹಳ್ಳದಲಿ ಹೂತು
ದೂರಿನ ಬಿರುಗಾಳಿಗೆ ಸಿಕ್ಕಿ, ಕಾವಿಯ ಗುಟ್ಟೆಲ್ಲವೂ ತೂರಿ ಆಗಸಕೆ ಹಾರಿಹೋಗಾಯ್ತು

ಕತ್ತಲೆಯಲಿ ಅತ್ತಾಯ್ತು, ಮತ್ತದಕೆ ಮೊಸಳೆಯ ಕಣ್ಣೀರನು ಧರಧರನೆ ಸುರಿಸಾಯ್ತು
ಜಗವೆಲ್ಲ ನಗುತಿರಲು, ಬೆತ್ತಲೆಯ ವ್ರತವನ್ನೇ ತೊಟ್ಟಿಹೆನೆನ್ನುತ್ತ ಎಲ್ಲೆಲ್ಲೂ ಅಲೆದಾಯ್ತು

ಸಾಲದೇ ಇನ್ನೂ ಕಳೆದ ದಿನಗಳ ಸೆರೆಮನೆಯ ವಾಸ? ಬಾರೆಲೇ ಮನವೆ ಇಂದಿಗೆ ಇದೀಗಲೇ
ಅತ್ತಿತ್ತ ನೋಡದಿರು, ಮತ್ತೆ ಹೊರಳಾಡದಿರು, ಹೊಸ ಉಸಿರಿನಲಿ ಸೊಗಸು ಕಾಣುವುದು ಭಲೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ