ಮಂಗಳವಾರ, ಆಗಸ್ಟ್ 3, 2010

ಕರಿಯೋ, ಬಿಳಿಯೋ?

ಕರಿಯೋ, ಬಿಳಿಯೋ?
ಕೆ. ಆರ್. ಎಸ್. ಮೂರ್ತಿ

ನರೆತ ಕೂದಲು ಒಂದು ಕರಿಯ ಕೂದಲುಗಳ ನಡುವೆ ಎದ್ದು ಕಾಣುತ್ತಿತ್ತು
ಕೀಟಲೆಯ ಕೇಕೆ, ಅಣಗಿಸುವ ಕೊಂಕು ನುಡಿ, ಕೆಣಕಿಸುವ ಖಾರ ಏರುತ್ತಿತ್ತು

ಒಬ್ಬ ಕರಿಯ ಕೂಗಿದ: "ಯಾರೋ ಇದು ಹೊಸಬ; ಇಲ್ಲಿಗೆ ಬಂದನಿವ ಹೇಗೆ?"
"ಬುಡದಿಂದ ಅಗೆದು, ಕಿತ್ತು ಒಗೆಯಿರೋ ಇವನ ಮತ್ತೆ ಬಾರದಂತೆ ಹೊರಗೆ"

ವಾರಗಳೇ ಕಳೆದು, ಕರಿಯರೆಲ್ಲ ಮರೆತು ಬಿಟ್ಟರು, ಇದ್ದರು ತಮ್ಮ, ತಮ್ಮ ಪಾಡಿಗೆ
ಮತ್ತೆ ಕೂಗಿದ ಇನ್ನೊಬ್ಬ ಕರಿಯ: "ಇದೇನಿದು! ಮತ್ತೆ ಬಂದನಲ್ಲ ಬಿಳಿಯ ಹೇಗೆ?"

ಇನ್ನೊಬ್ಬ ಕರಿಯ ಮತ್ತೆತ್ತಲೋ ಎಂಬಂತೆ, "ಇನ್ನೊಬ್ಬ ಬಿಳಿಯ ಇಲ್ಲಿ ನೋಡಿರೋ!"
ಒಬ್ಬನನು ಹೊಡೆದೋಡಿಸಿಯಾಯ್ತು, ಮತ್ತೊಬ್ಬ ಕೂಡ ಬಂದು ಸೇರಿದ ನೋಡಿರೋ"

ತಿಂಗಳು ಉರುಳಿತು, ಒಬ್ಬನಲ್ಲ, ಇಬ್ಬರಲ್ಲ ಎಲ್ಲೆಲ್ಲಿ ನೋಡಿದರೂ ಕಾಣುವರು ಬಿಳಿಯರೇ
ಕರಿಯರನ್ನು ಒಂದೋ, ಎರಡೋ ಕೈ ಬೆರೆಳಲ್ಲಿ ಎಣಿಸಿಬಿಡಬಹುದು, ಗೆದ್ದವರು ಬಿಳಿಯರೇ!

ವರುಷಗಳು ಸವೆದವು, ಅಲ್ಲೊಬ್ಬ, ಇಲ್ಲೊಬ್ಬ ಕಂಡರೆ ಹೆಚ್ಚು, ಕರಿ ಬಿಳಿಯೆಲ್ಲ ಖಾಲಿ, ಖಾಲಿ
ತಲೆಯ ಮೇಲೆ ಎಂದೂ ಬಣ್ಣ ಬದಲಾಗದ ಕರೀ ಕಾರ್ಪೆಟ್ಟು, ಹಜಾಮನ ಜೇಬು ಮಾತ್ರ ಖಾಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ