ಸೋಮವಾರ, ಜನವರಿ 10, 2011

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು + ಕನ್ನಡಮ್ಮನಿಗೆ ಆರತಿಯ ಹಾಡು

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು + ಕನ್ನಡಮ್ಮನಿಗೆ ಆರತಿಯ ಹಾಡು ಕೆ. ಆರ್. ಎಸ್. ಮೂರ್ತಿ

ಪ್ರಿಯ ಕನ್ನಡ ಹಾಡುಗಾರರಿಗೆ:

ನಾನು ಈ ಕೆಳಗಿನ ಆರತಿಯ ಹಾಡನ್ನು ಕನ್ನಡ ಕಾರ್ಯ ಕ್ರಮದ ಸಂದರ್ಭಗಳಲ್ಲಿ ಕನ್ನಡ ಮಾತೆಗೆ ಆರತಿಯನ್ನು ಮಾಡುವಾಗ ಮುನ್ನೆಲೆ ಗಾಯಕರು ಹಾಡಿ, ಜೊತೆಗೆ ಹಿನ್ನೆಲೆ ಗಾಯಕರು ಗುಂಪಿನಲ್ಲಿ "ಆರತಿ ಇತ್ತೀರೆ / ಆರತಿ ಬೆಳಗೀರೆ + ಜೊತೆಗೆ ----- ಬೆಳಕಿನಾರತಿ, ಮಂಗಳಾರತಿ ಮುತ್ತಿನಾರತಿ, ಹೂವಿನಾರತಿ, ಗಂಧದಾರತಿ, ಕುಸುಮದಾರತಿ, ಸುತ್ತಿನಾರತಿ... ಇತ್ಯಾದಿಯಾಗಿ ಒಂದಾದ ಮೇಲೊಂದಾಗಿ ಹೇಳಬಹುದು. ಜೊತೆಗೆ ಕೊಳಲು, ವೀಣೆ, ಪಿಟೀಲು, ಮೃದಂಗ, ತಬಲಾ ಮೊದಲಾದ ವಾದ್ಯಗಳು, ತಾಳ, ಗೆಜ್ಜೆ, ಗಂಟೆ ಇತರರ ತಾಳ ಸಲಕರಣೆಗಳು ಉಪಯೋಗಿಸುವುದು ಸೂಕ್ತ. ನಿಮ್ಮ ಅನುಕೂಲಕ್ಕೆ ಅನುಯಾಯಿ ಪದ ಪಲ್ಲಟ ಮಾಡಿಕೊಳ್ಳಿ.

ನಿಮಗೆ ಇಷ್ಟವಾದ ರಾಗವನ್ನೋ, ರಾಗ ಮಾಲಿಕೆಯಾಗೋ ಹಾಕಿಕೊಂಡು ಹಾಡಬಹುದು. ಅಗತ್ಯವಿದ್ದರೆ, ನನಗೆ ಈಮೈಲ್ ಮಾಡಿದರೆ ಅಥವಾ ೪೦೮-೪೬೪-೩೩೩೩ ಗೆ ಫೋನು ಮಾಡಿದರೆ, ನಾನು ರಾಗ ಹಾಕಿ ನಿಮಗೆ ಕಳಿಸಿಕೊಡುತ್ತೇನೆ.

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು:

ಆಗಲೇ, ಕೆಲವು ಕನ್ನಡಿಗರು ಹಾಗೂ ನನ್ನ ಸ್ನೇಹಿತರು, ತಮಗೆ ಪ್ರಿಯವಾದ ಹೆಸರಾಂತ ಕನ್ನಡಿಗರನ್ನು ಈ ಆರತಿಯ ಹಾಡಿನಲ್ಲಿ ಸೇರಿಸ ಬೇಕೆಂದು ಕೋರಿದ್ದಾರೆ. ನೀವು ಕೂಡ ನಿಮ್ಮ ಕೋರಿಕೆಗಳನ್ನು ನನಗೆ ಕಳಿಸಿ ಕೊಡಿ. ಇದುವರೆಗೂ ಬಂದಿರಿರುವ ಕೋರಿಕೆಗಳು ಈ ಕೆಳಗಿವೆ:
ಎಲ್ಲ ಕನ್ನಡದ ಜ್ಞಾನ ಪೀಠ ಪ್ರಶಸ್ತಿಗಾರರು
ವಿಶೇಶ್ವರಯ್ಯ
ಹಕ್ಕ, ಬುಕ್ಕ
ವಿಷ್ಣುವರ್ಧನ - ರಾಜ (ಸಿನಿಮಾ ನಟರಲ್ಲ)
ನಿಮ್ಮ ಕೋರಿಕೆಗೆ ಉದಾಹರಣೆಗಳು: ಸಂಗೀತಗಾರರು, ಶಿಲ್ಪಿಗಳು, ಇತರ ಕಲಾಕಾರರು, ಮಹಾ ಸಂತ, ಶರಣ, ಗುರು, ಸ್ವಾಮಿಗಳು, ತೀರ್ಥ ಯಾತ್ರಾಸ್ಥಳಗಳು, ಆಧ್ಯಾತ್ಮಿಕ ನೇತಾರರು (ಜೈನ, ಹಿಂದೂ, ಇತ್ಯಾದಿ), ವಿಜ್ಞಾನಿಗಳು, ಸಮಾಜ ಸೇವಕರು, ಇತರ ಹೆಸರಾಂತ ಸಾಹಿತಿಗಳು.

ಆರತಿಯ ಹಾಡು
ಕೆ. ಆರ್. ಎಸ್. ಮೂರ್ತಿ

ಬೆಳಗಿರೆ ಆರತಿಯ ಅರಳಿಸಿ ಚಿತ್ತವನು ಬೆಳಗುವ ಸರಸತಿಗೆ
ನಿತ್ಯ ಸತ್ಯ ಆರತಿಯ ಯತಿಗಳ ಮತಿಯಲ್ಲಿ ಹೊಳೆಯುವಳಿಗೆ

ಹೂವಿನಾರತಿಯನೆತ್ತಿರೆ ಕನ್ನಡಮ್ಮ ದೇವಿ ಭುವನೇಶ್ವರಿಗೆ
ಸುತ್ತಿನಾರತಿಯ ಎತ್ತಿರೆ ಶೃಂಗೇರಿ ಮಾತೆ ಶಾರದಾ ದೇವಿಗೆ

ತುಪ್ಪದಾರತಿಯ ಒಪ್ಪದಲಿ ಅರ್ಪಿಸಿ ಹೊಗಳಿರೆ ಸರ್ವಮಂಗಲೆಗೆ
ಸಿರಿ ಗಂಧದಾರತಿಯ ಚೆಂದದಲಿ ಮನ ಮಂದಿರದಲಿ ನಲಿವಳಿಗೆ

ವೀರ ನಾರಾಯಣನ ವರಿಸಿ ಕರುನಾಡಿನ ಗದಗಿನಲ್ಲಿ ನೆಲೆಸಿದವಳಿಗೆ
ಕಾವ್ಯದಾರತಿಯ ನಾರಣಪ್ಪ ಕುಮಾರ ವ್ಯಾಸನನು ಹರಸಿದವಳಿಗೆ

ನಮ್ಮೆಲ್ಲರ ಪೆರ್ಮೆ ಪಂಪ ಮಹಾಕವಿಯ ಪೆತ್ತು, ಪೊತ್ತು ಇತ್ತವಳಿಗೆ
ರನ್ನ, ಜನ್ನ, ರಾಘವಾಂಕ, ಹರಿಹರ, ಮಾದೇವಿ, ಬಸವಣ್ಣನಮ್ಮನಿಗೆ

ಕನ್ನಡದ ಕಂಪು ಕುವೆಂಪು, ಸರ್ವಜ್ಞ, ಎಲ್ಲಬಲ್ಲ ಮಂಕುತಿಮ್ಮನಮ್ಮನಿಗೆ
ಬೆಂದು ಅಮೃತವಾದ ಬೇಂದ್ರೆ, ಕಾರ್ನಾಡರ ಮಡಿಲಲ್ಲಿ ಆಡಿಸಿದವಳಿಗೆ
,
ತಲಕಾಡಿನ ಕಾವೇರಿಯ ತೀರ್ಥ, ಮೈಸೂರಿನ ಸುವಾಸನೆಯ ಮಲ್ಲಿಗೆ
ಗಂಧ, ಚಂದನ ಲೇಪನ, ಶಾಂತಲೆಯ ನರ್ತನ, ಕೋಗಿಲೆಯ ಗಾನಕ್ಕೆ

ಕಾದು ಬಂದಿಹಳು ನಮ್ಮೆಲ್ಲರ ಹೊತ್ತು ಸಲಹಿದ ಅಕ್ಕರೆಯ ಅಮ್ಮನಿಗೆ
ಎದೆಯಿಂದ ತುಂಬಿ ಬಂದ ಕರುಳಿನ ಕರೆಯಿಂದ ಆರತಿ ಕನ್ನಡಮ್ಮನಿಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ