ಶುಕ್ರವಾರ, ಮಾರ್ಚ್ 26, 2010

ಏನು ಎನ್ನುವುದೇ ಎನ್ನ ಬೀಜ ಮಂತ್ರ

ಏನು ಎನ್ನುವುದೇ ಎನ್ನ ಬೀಜ ಮಂತ್ರ
ಕೆ. ಆರ್. ಎಸ್. ಮೂರ್ತಿ

ನಾನೇ ನೀನಂತೆ, ನೀನು,
ಅವನು, ಅವಳೂ, ಅವರು,
ಮಿಕ್ಕೆಲ್ಲವರೂ ನಾನೇ ಅಂತೆ.

ತರು, ತುರು, ನೀರು,
ನೆಲ, ನಭದ ತಾರಾಕೂಟ,
ಅನಿಲ, ಅನಲವೆಲ್ಲವೂ ನಾನೇ ಅಂತೆ.

ಇಂದು, ಅಂದೂ, ಎಂದೆಂದೂ,
ಬಂದುದು, ಇಂದು ಬಂದಿಹುದು,
ಮುಂದೆ ಬರುವುದೂ ಬರಿ ಸುಳ್ಳಂತೆ.

ಭ್ರಮೆಯಂತೆ ಇದೆಲ್ಲ,
ಬರಿ ಬೊಕಳೆಯ ಬಾಳಂತೆ,
ಭ್ರಮಿಸುವನು ಎಲ್ಲವನೂ ಎಲ್ಲೂ ಇಲ್ಲವಂತೆ.

ನನಸೆಲ್ಲವೂ ಕನಸಂತೆ,
ನನಸು ಮನಸ್ಸಿನ ಮರೆಯಾಟವಂತೆ,
ಕನಸಿಗನೇ ಇಲ್ಲದೆ ಕನಸಾಗುವ ಪರಿಯಂತೆ.

ಸರಿಯಾವುದು, ದಿಟವಾವುದು,
ಖರೆಯಾವುದು, ಅರಿಯದು ಎನಗೆ,
ಪರಿ, ಪರಿ ಚಿಂತಿಸಿ ಆಯಿತು ತಲೆ ಬಿಸಿಯಾಯಿತು

ನೂರು ವರುಷಗಳು ಸಾಕೇ?
ಸಾವಿರ ಜನುಮಗಳು ಸಾಕೇ?
ಕೋಟಿ ಜಂಗಮರು, ಜಗದ್ಗುರು, ಸಾಧುಗಳು ಸಾಕೇ?

ಸಾವಿರ ಕೋಟಿ ತರತರದ ತಾರೆಗಳು,
ಸಿಡಿದು ಜ್ವಲಿಸುವ ತಾರಾ ಸ್ಫೋಟಗಳು,
ಹಲವಾರು ಆಗಸದಲಿ ಮೆರೆಯುತಿಹ ವಿಸ್ಮಹವನು

ಅರಿತಿಹರೇ ಅರಿಶಡ್ವರ್ಗ ಬಿಸುಟ
ಬೆತ್ತಲೆಯ ಬೈರಾಗಿಗಳು, ಗುರುಗಳು,
ಕಾಡು, ಗುಡ್ಡಗಾಡನು ಮನೆಮಾಡಿದ ಸನ್ಯಾಸಿಗಳು?

ಅದೇನು, ಇದೇನು, ಅದು ಹೇಗೆ, ಇದು ಏಕೆ,
ಇದೇ ನನ್ನ ಬೀಜ ಮಂತ್ರ, ಜಪ, ತಪವಿನ್ನೇಕೆ,
ಉಧ್ಧಟಿ ಎನಗೆ ಹುಟ್ಟಿನಿಂದ ಚಟ್ಟ ಸವಾರಿಯತನಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ