ಶುಕ್ರವಾರ, ಆಗಸ್ಟ್ 13, 2010

ಮೊದಲ ದೇವರು

ಮೊದಲ ದೇವರು
ಕೆ. ಆರ್. ಎಸ್. ಮೂರ್ತಿ

ಎಮ್ಮೆಲ್ಲರ ಕನಸಿನಲಿ ಕಂಡೆ, ಗುಂಡಿಗೆಯಲಿ ಹೊಕ್ಕಿಸಿಕೊಂಡೆ

ಒಂದಲ್ಲ, ಎರಡಲ್ಲ ಒಂಬತ್ತು ತಿಂಗಳು ನಡೆದೆ ಹೊತ್ತುಕೊಂಡೇ


ಹಾಲು, ಪರಮಾನ್ನದ ಅಮೃತದ ಸಮಾರಾಧನೆ ಹೊತ್ತು, ಹೊತ್ತಿಗೆ

ತುಸು ನಿದ್ದೆ ಬಂದೊಡನೆಯೇ ಮಲಗಲು ಸದಾ ಸಿಧ್ಧ ಹಾಯಿ ಹಾಸಿಗೆ


ನಾವು ತುಸು ನಕ್ಕಾಗ ನಿನಗಾದ ಆನಂದಕ್ಕೆ ಕಿಂಚಿತ್ತೂ ಮಿತಿಯಿರಲಿಲ್ಲ

ಕನಿಕರದಿ ಕರಗುತಿತ್ತು ನಿನ್ನ ಗುಂಡಿಗೆ ನಾವು ಸ್ವಲ್ಪವೇ ಅತ್ತಾಗಲೆಲ್ಲ


ದೂರ ದೇಶಕ್ಕೆ ನಾನಂದು ಹೊರಟು ನಿಂತಾಗ ಬಹಳ ಸಂಭ್ರಮದಲ್ಲಿ

ನಿನಗೂ ಆನಂದವಾದರೂ, ಕಂಡೆ ಒಂದೆರಡು ಹನಿ ನಿನ್ನ ಕಣ್ಣಂಚಿನಲ್ಲಿ


ನೀನೀಗ ಹೊರಟು ಬಿಟ್ಟೆ ನಮ್ಮೆಲ್ಲರ ಹಿಂದೆಯೇ ಬಿಟ್ಟು, ಬಹು ದೂರ ದೂರ

ನೀನಿಲ್ಲದೀ ಊರೀಗ ಬಹಳ ಬೇರೆ, ಬೇರೆ; ದುಡುಕು ಮನ ನೊಂದಿದೆ ಅಪಾರ


ಎಮ್ಮ ಹೆತ್ತು, ಹೊತ್ತೆ, ಪೊತ್ತೆ; ನಿನ್ನ ನೆನಪಿನ ಹರಕೆ ಇರಲಿ ನಮಗೆಲ್ಲಾ

ನಿನ್ನ ಬಿಂಬವ ಕಾಣುವೆವು ತಾಯೇ ನಮ್ಮ ಮಕ್ಕಳ, ಮೊಮ್ಮಕ್ಕಳ ಕಣ್ಗಳಲೆಲ್ಲಾ


ನಾವೂ, ನಿನ್ನ ಮೊಮ್ಮಕ್ಕಳೂ ದಿನ ದಿನವೂ ನಡೆದಾ ಹಾದಿಯಲೆಲ್ಲ ಇರಲಿ ಸದಾ

ನಿನ್ನ ನಗೆಯೇ ನಮಗೆ ದಾರಿ ದೀಪ; ಕಾಯುವುದು ಅಭಯ ಹಸ್ತದ ಆಶೀರ್ವಾದ

ಗುರುವಾರ, ಆಗಸ್ಟ್ 12, 2010

ಏನೆಲ್ಲಾ ಬೇಕು?

ಏನೆಲ್ಲಾ ಬೇಕು?
ಕೆ. ಆರ್. ಎಸ್. ಮೂರ್ತಿ

ಪೇಳು ತನುವೇ ನಿನಗೇನೆಲ್ಲ ಬೇಕು,
ನಾಚುವುದೇತಕೆ ಚಾಚು ನಾಲಗೆಯ,
ಅದಗಿಸಿಹ ನಿನ್ನ ಹಂಬಲಗಳನು.
ಹಸಿದ ಹೊಟ್ಟೆಯೋ?
ತುಪ್ಪದಲಿ ಅದ್ದಿದ ರೊಟ್ಟಿಯೋ?
ಹೊಟ್ಟೆಗೆ ಭಾರ ತರಿಸುವ ಭಾರಿ ಔತಣವೋ?

ಕೇಳು ಮನವೇ ಬೇಕಾದುದನೆ, ಸಾಕಷ್ಟು.
ಬಿಚ್ಚಿ ಪೊಗಳು, ಮುಚ್ಚಿಟ್ಟ ಇಷ್ಟಗಳೆಲ್ಲವನು.
ಚಿಂತನೆಯ ಮನೋಭಾವವೋ?
ಕಾಡುವ ಕಾರ್ಪಣ್ಯಗಳ ಹೊಣೆ ಭಾರವೋ?
ಸದಾ ಶಾಂತತೆಯ ವರವನ್ನೋ?
ಇತರರ ಬೈಯುವ ದೆವ್ವವಾಗುವುದೋ?

ಇದ ಕೊಡಿಸಬಲ್ಲೆ ನಿನಗೆ, ಒಮ್ಮೊಮ್ಮೆ ಮಾತ್ರ:
ಗೆಲುವಿನ ಬೆಲ್ಲದುಂಡೆ, ಜಯದ ಕಜ್ಜಾಯ, ಸಾಹಸದ ಪಾಯಸ
ವೀರ್ಯದ ಖೀರು, ಒಗ್ಗಟ್ಟಿನ ಒಬ್ಬಟ್ಟು, ಕಳಕಳಿಯ ಕಡಲೆ ಕಾಯಿ,
ದಾನವನು ಕೊಟ್ಟಾಗ ಹೃದಯಕ್ಕಾಗುವ ಪರಮಾನ್ನ,
ದಯವಿಟ್ಟಾಗ ದೊರೆಯುವ ಧಮ್ರೋಟು, ಚಿರೋಟಿ
ಕೈ ಕೆಸರಾದರೆ ಸಿಗುವ ಗಟ್ಟಿ ಕೆನೆ ಮೊಸರನ್ನ

ಬಲು ಜಾಣ! ಈಗ ನೀನೇ ಹೇಳು:
ಏನು ಮಾಡಿದರೆ, ಯಾವಾಗ ಇವೆಲ್ಲ ದೊರೆಯುತ್ತದೆ?
ಮೈಸೂರು ಪಾಕು, ಬಾದಾಮಿ ಹಲ್ವ, ಸಿಹಿ ಫೇಡ, ಲಾಡು ಉಂಡೆ?
ನಿನಗೆ ಖಾರದ ರುಚಿ ಹೆಚ್ಚಿದ್ದರೆ:
ಬಿಸಿ ಬೇಳೆ ಹುಳಿಯನ್ನ, ಎಳ್ಳು ಪುಡಿ ಚಿತ್ರಾನ್ನ,
ಚಟ್ನಿ ಪುಡಿ, ಉಪ್ಪಿನ ಕಾಯಿ, ಬಾಳಕದ ಮೆಣಸಿನ ಕಾಯಿ,
ವಡೆ, ಅಂಬೋಡೆ, ಬೋಂಡ, ಜೊತೆಗೆ ಬಹು ವಿಧದ ಚಟ್ನಿ
ಇದನರಿತವ ನಿನಗೆ ತನು ಕೇಳಿದ್ದು, ಮನ ಬೇಡಿದ್ದು ಖಂಡಿತ

ಬುಧವಾರ, ಆಗಸ್ಟ್ 11, 2010

ಡಾಕ್ಟರ್ ಮೂರ್ತಿ ನುಡಿದಂತೆ:

ಡಾಕ್ಟರ್ ಮೂರ್ತಿ ನುಡಿದಂತೆ:

ಕನ್ನಡ ನುಡಿಯಾಡಿದೊಡನೆ ಹಾಡಿದಂತೆಯಲ್ಲವೇ

ಕನ್ನಡಿಯಲ್ಲಿ ಕಾಣುವವರು ಬೇರೆ ಬೇರೆ: ಗಾಜಿನ ಹಿಂದೆ ಇರುವ ಬಿಂಬ ಅತಿ ಸುಂದರ ಬೊಂಬೆ; ಮನದೊಳಗಿನ ಬೊಂಬೆಗೆ ಹತ್ತಾರು ಅವತಾರ; ಇತರರಿಗೆ ಇರಬಹುದೇನೋ ಅತ್ತತ್ತ!

ಎದೆಯೊಳಗಿನ ಕೋಗಿಲೆ ಒಡನೆ ಹಾಡಿತು ಗುಪ್ತ ಗಾನ: ನೀನು ನೀನಲ್ಲ; ಆನೇ ಎಲ್ಲ.

ಅವರ ಕಂಡು ಉರಿದು, ಇವರ ಕಂಡು ತುರಿಸಿ, ಅವರಿವರ ಕಂಡು ನಕ್ಕುತ ಇರುವುದ ಬಿಡು; ಸರಿ ಇರುವ ಪರಿ ಕಂಡುಕೊ.

ಅಸಮಾನ ಮಾನಸಿ

ಅಸಮಾನ ಮಾನಸಿ
ಕೆ. ಆರ್. ಎಸ್. ಮೂರ್ತಿ

ನೀನಡೆವಾ ಅಡಿಯಲೆಲ್ಲ ರಂಗೋಲೆ ಪುಡಿ ಹಾಸುವುದು
ನಿನ್ನ ತುಟಿ ಬಿರಿದಾಗ ಕೋಗಿಲೆ ಕುಲವೆಲ್ಲ ಅನಿಕರಿಸಿತು

ನಿನ್ನ ಕೆನ್ನೆ ಕೆಂಪಾದಾಗ ತಾವರೆಯು ಅಂತೆಯೇ ಅರಳಲು
ನಿನ್ನ ಕಣ್ಣು ಹಾಯಿಸಿದೆಡೆಯಲೆಲ್ಲಾ ಕೆಂಗುಲಾಬಿ ಚಿಗುರಲು

ನಿನ್ನ ರೂಪವ ನೋಡಿದೊಡನೆಯೇ ಊರ್ವಶಿಯೂ ದಂಗಾಗಿ
ಮೇನಕೆ, ರಂಭೆಯರು ಮರುಗಿದರು ಬ್ರಹ್ಮನನು ಮೊರೆಹೋಗಿ

ನಿನ್ನ ಹೆಸರೇನು? ನಿನ್ನ ಮೇಲೆನ್ನ ಮನಸಾಗಿದೆ ಸರಸಾಂಗಿ
ಮನಸಿಜಳೆನ್ನಲೇ? ಕನಸಿನಲಿ ಬಂದವಳು ಇರು ನನಸಾಗಿ

ಟಿಪ್ಪೆಲ್ಲಿ ಇಲ್ಲ ನೀವೇ ಹೇಳಿ

ಟಿಪ್ಪೆಲ್ಲಿ ಇಲ್ಲ ನೀವೇ ಹೇಳಿ
ಕೆ. ಆರ್. ಎಸ್. ಮೂರ್ತಿ

ಟಿಪ್ಪಿಲ್ಲಿ, ಟಿಪ್ಪಲ್ಲಿ, ಟಿಪ್ಪು, ಟಿಪ್ಪು, ಟಿಪ್ಪು
ಅಲ್ಪ ಸ್ವಲ್ಪ ನಕ್ಕರೆ, ಸ್ವಲ್ಪ ಹೆಚ್ಚು ಟಿಪ್ಪು

ನಕ್ಕವಳು ಸಕ್ಕರೆಯ ನಗೆ ಬೆರೆಸಿ ಉಪ್ಪು
ತಂದು ಕೊಟ್ಟರೆ ಸಕ್ಕರೆಗಿಂತ ಇನ್ನೂ ಟಿಪ್ಪು

ನಿಮ್ಮ ಕಡೆ ಬಗ್ಗಿ, ಸ್ವರ್ಗ ತೋರಿಸಿದರೆ ಸಾಕು
ಕಣ್ಣಿಗಾನಂದ; ಕನ್ಯೆಗೆ ಇನ್ನಷ್ಟು ಟಿಪ್ಪು ಹಾಕು

ಅತ್ತ ಕಡೆ ಬಗ್ಗಿದರೂ ಅದೇ ಬೇರೆಯ ಆನಂದ
ಸುಂದರ ಕನ್ಯೆಯು ಏನು ಮಾಡಿದರೂ ಅಂದ

ನೋಡಿ, ನೋಡಿ ಬಾಯಾರಿದರೆ ಕೇಳಿ ವೈನು
ವೈಟೋ, ಪಿಂಕೋ, ಅವಳಿಗೆ ಹೊಡೆಯಿರಿ ಲೈನು

ಅವಳ ಉತ್ತರ ಏನೇ ಇರಲಿ ನಿಮ್ಮ ಕೆನ್ನೆ ಕೆಂಪು
ಗೊತ್ತವಳಿಗೆ ನೀವೆಲ್ಲದಿಕ್ಕೂ ಒಡನೆ ಆಗುವಿರಿ ಬೆಪ್ಪು

ಮೈಕಾವೂ, ಟಿಪ್ಪೂ ಏರಿ, ಏರಿ ನಿಮ್ಮ ಜೇಬು ಖಾಲಿ
ಮನೆಗೆ ಕಾಲಿಟ್ಟರೆ ಹೆಂಡತಿ ಕಿವಿ ಹಿಂಡುವಳು ವಾಚಾಳಿ

ಶನಿವಾರ, ಆಗಸ್ಟ್ 7, 2010

ಕಲ್ಪನೆಯೇ ಕಲ್ಪತರು, ಕಾಮಧೇನು

ಕಲ್ಪನೆಯೇ ಕಲ್ಪತರು, ಕಾಮಧೇನು
ಕೆ. ಆರ್. ಎಸ್. ಮೂರ್ತಿ

ಮೇಲಿಂದ ಮೇಲೆ, ಅಲೆಯ ಹಿಂದೊಂದು ಅಲೆ, ಉಬ್ಬಿ, ಹಿಗ್ಗಿ, ಬರುತಲಿದೆ ಸಲಿಲ
ಕಲ್ಪನೆಯ ಮೇಲೆ ಮತ್ತೊಂದು ಮರುಕಲ್ಪನೆ; ಒಂದಕ್ಕಿಂತ ಹಿರಿದು ಲೀಲಾಜಾಲ

ಬಲೆಯಲಿ ಹಿಡಿವುದುಂಟೇ? ಇರುವ ಐವತ್ತೆರಡು ಅಕ್ಷರದ ಬಲೆಯಲ್ಲಿ ಬರೀ ತೂತು
ಕವಿಯ ಕಲೆಯು ಸಾಲದು, ಭುವಿಯ ಕವಿ ಕುಲವೇ ಸಾಲು, ಸಾಲು ಬಂದು ನಿಂತು

ಕುಂಚದ ಕಲೆಗೂ ಕಿಂಚಿತ್ತೂ ಎಟುಕದು; ಕಲ್ಲಿನಲ್ಲಿ ಅಲೆಯಲೆಯ ಸಾಲುಗಳ ಕೆತ್ತಲಾಗದು
ನಾರದ, ಕಿನ್ನರ, ತುಂಬುರ, ಗಾನ ಗಂಧರ್ವರ ಕೊರಳು ಭೋರ್ಗರೆಯ ಪಾಡಲಾಗದು

ಕಲ್ಪನಾ ವಿಲಾಸವು ಒಲಿದು ಇತ್ತ ಹಾಯಿ, ದೇವ ಲೋಕದ ಅನುಭವವನೇ ನಾಚಿಸಿದೆ
ಅಲ್ಪವಾದರೂ ಸಾಕಿದೇ ವರ, ಕಲ್ಪತರು, ಕಾಮಧೇನುಗಳು ಇನ್ನೇಕೆ ಬೇಕು ಎನ್ನಿಸುತಿದೆ

ನಿನ್ನೆಯ ಸೆರೆಮನೆ

ನಿನ್ನೆಯ ಸೆರೆಮನೆ
ಕೆ. ಆರ್. ಎಸ್. ಮೂರ್ತಿ

ನಿನ್ನೆಗೆ ಹೊಗಾಯಿತು; ಮೊನ್ನೆಯ ಹಂಬಲು ಹಂಪಲು ಹಣ್ಣೆಲ್ಲ ತಿಂದಾಯಿತು.
ಹಿಂದಿನ ಹಳಸಿದ ಹುಳಿಯನ್ನವನ್ನು ಕಬಳಿಸುತಲಿ ತಿಂದು ವಾಕರಿಸಿಯಾಯಿತು.

ಭೂತದ ಕನ್ನಡಿಯಲ್ಲಿ ಹುದುಗಿ ಹೋದ ಕಾಂಚನಕ್ಕೆಲ್ಲ ತೀರದಷ್ಟು ಆಶಿಸಿ
ಮೊನ್ನೆಯ ಸೊನ್ನೆಗೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು, ಕೈಗೆಟುಕದ ಕನ್ನೆಯನ್ನು ಮುದ್ದಿಸಿ

ಕನಸಿನಲಿ ಕಲ್ಪನೆಯ ಅರಮನೆ ಕಟ್ಟಿ, ದಟ್ಟ ಮೀಸೆಯನೇ ಹೊಸೆದು ಜರೆದಾಯ್ತು
ಮೈಮೇಲೆ ನೂರಾರು ನೀರೆಯರ ಕೂರಿಸಿ, ಸಾವಿರ ವೀರ್ಯ ಪಾತದಲಿ ಮೆರೆದಾಯ್ತು

ರಾವಣನ ಸಿಂಹಾಸನದಲಿ ಕೆಲ ವರುಷ, ದುಶ್ಯಾಸನನ ಆಸೆಯಲಿ ಮೆರೆಯುತ ಮಿಕ್ಕೆಲ್ಲ
ನಿಯೋಗಿ ಭೋಗದಲಿ ಭೂಮಿಯನು ಸುತ್ತಲೆದು, ಅಂದಾಯ್ತು "ಆ ಕಂದನು ನನ್ನದಲ್ಲ"

ಕಾವಿಯೊಳಗೆ ಕಳ್ಳ ಸ್ವಾಮಿಯಾಗಿ ನೀನ್ನೆಲ್ಲರ ಹೊನ್ನನು ಹೊತ್ತು, ಹಳ್ಳದಲಿ ಹೂತು
ದೂರಿನ ಬಿರುಗಾಳಿಗೆ ಸಿಕ್ಕಿ, ಕಾವಿಯ ಗುಟ್ಟೆಲ್ಲವೂ ತೂರಿ ಆಗಸಕೆ ಹಾರಿಹೋಗಾಯ್ತು

ಕತ್ತಲೆಯಲಿ ಅತ್ತಾಯ್ತು, ಮತ್ತದಕೆ ಮೊಸಳೆಯ ಕಣ್ಣೀರನು ಧರಧರನೆ ಸುರಿಸಾಯ್ತು
ಜಗವೆಲ್ಲ ನಗುತಿರಲು, ಬೆತ್ತಲೆಯ ವ್ರತವನ್ನೇ ತೊಟ್ಟಿಹೆನೆನ್ನುತ್ತ ಎಲ್ಲೆಲ್ಲೂ ಅಲೆದಾಯ್ತು

ಸಾಲದೇ ಇನ್ನೂ ಕಳೆದ ದಿನಗಳ ಸೆರೆಮನೆಯ ವಾಸ? ಬಾರೆಲೇ ಮನವೆ ಇಂದಿಗೆ ಇದೀಗಲೇ
ಅತ್ತಿತ್ತ ನೋಡದಿರು, ಮತ್ತೆ ಹೊರಳಾಡದಿರು, ಹೊಸ ಉಸಿರಿನಲಿ ಸೊಗಸು ಕಾಣುವುದು ಭಲೆ!