ಸೋಮವಾರ, ಜನವರಿ 10, 2011

ನಮ್ಮ ರವಿಯನ್ನು ನೀವು ಇತೀಚೆಗೆ ನೋಡಿದ್ದೀರಾ?

ನಮ್ಮ ರವಿಯನ್ನು ನೀವು ಇತೀಚೆಗೆ ನೋಡಿದ್ದೀರಾ?
ಕೆ. ಆರ್. ಎಸ್. ಮೂರ್ತಿ

ನಾನು: ಇತ್ತೀಚಿಗೆ, ನೀವೇನಾದರೂ ನಮ್ಮ ರವಿಯನ್ನು ನೋಡಿದಿರಾ? ದಿನಾನೂ ಬರುತ್ತಿದ್ದವನು ಇತ್ತೇಚೆಗೆ ಏನೋ ಬರುತ್ತಲೇ ಇಲ್ಲ! ಏನ್ರೀ! ಅವನೇನಾದರೂ ರಜೆ ತೆಗೆದು ಕೊಂಡಿದ್ದಾನೇನು? ಅವನು ಹೀಗೆ ತಿಂಗಳಾನುಗಟ್ಟಲೆ ರಜೆ ತೆಗೆದುಕೊಂಡರೆ, ನಮ್ಮೆಲ್ಲರ ಗತಿಯೇನು? ಅವನಿಲ್ಲದಿದ್ದರೆ, ನಮ್ಮ ಜೀವನದಲ್ಲಿ ಕಪ್ಪು ಮೋಡ ಕವಿದು ಕೊಂಡ ಹಾಗೆ. ನನಗೇನೋ ಅವನಿಲ್ಲದಿದ್ದರೆ ಮೈಯಲ್ಲೆಲ್ಲಾ ಚಳಿ, ನಡುಕ ಬಂದು ಬಿಡುತ್ತದೆ.

ನೀವು: ಯಾರ್ರೀ ಅವನು? ಅವನ ಹೆಸರು ರವಿ ಅಂದಿರಾ? ಯಾರೋ ಅವನು ಹ್ಯಾಗಿದಾನೆ ಅಂತ ಜ್ಞಾಪಕ ಬರುತ್ತಿಲ್ಲವಲ್ಲ! ನಾನೂ, ನೀವೂ ನೋಡಿದ್ದು ಗ್ಯಾರಂಟಿ ತಾನೇ?

ನಾನು: ಏನ್ರೀ ನೀವು ಇಷ್ಟು ಪೆದ್ದು ಪೆದ್ದಾಗಿ ಮಾತಾಡ್ತಾ ಇದ್ದೀರಿ! ನಮ್ಮ ರವಿಯನ್ನು ನೋಡಿದ್ದು ಜ್ನಾಪಕವೇ ಇಲ್ಲಾ ಅಂತೀರಲ್ಲಾ! ನಾನೂ, ನೀವೂ, ಎಲ್ಲರೂ ನೋಡಿದ್ದೀವಿ ಸ್ವಾಮಿ!

ನೀವು: ನಾನು ಅಷ್ಟೊಂದು ಪೆದ್ದಾನೆನ್ರೀ? ಎಲ್ಲರೂ ನನ್ನನ್ನು ಪೆದ್ದಾ ಅಂತ ಒಂದೊಂದು ಸಾರಿ ಕರೆಯುವುದು, ನನ್ನನ್ನು ತಮಾಶಿ ಮಾಡಿ ಕೊಂಡು ನಗುವುದು ನನಗೂ ಗೊತ್ತು. ನನ್ನ ಹೆಂಡತಿ ಕೂಡ ನನ್ನನ್ನು, ಬೆಡ್ ರೂಮಿನಲ್ಲಿ ಶತ ಪೆದ್ದು ಅಂತ ಅಂತಾ ಇರ್ತಾಳೆ. ನನಗೆ ಏನೂ ಗೊತ್ತಿಲ್ಲಾ ಅಂತ ಅಣಕಿಸುತ್ತಾಳೆ; ಕಿಸಿ ಕಿಸೀ ಅಂತ ನಗುತ್ತಾಳೆ.

ನಾನು: ನಿಮ್ಮ ಹೆಂಡತಿ ನಿಮ್ಮನ್ನ ಪೆದ್ದು ಗುಂಡಾಂತ ಅಣಕಿಸಿ ನಗುವುದು ಊರಿಗೇ ಗೊತ್ತು. ನನ್ನ ಹತ್ರಾನೂ ಬಹಳ ಸಾರಿ ಹೇಳಿದ್ದಾಳೆ. ಅದೆಲ್ಲಾ, ನನ್ನ ಅವಳ ಗುಟ್ಟು; ಅದನ್ನು ನಿಮಗೆ ಹೇಳುವ ಹಾಗಿಲ್ಲ. ಅದಿರಲಿ ಬಿಡಿ. ಮುಖ್ಯ ವಿಷಯಕ್ಕೆ ಬನ್ನಿ.

ನೀವು: ಸರಿಯಪ್ಪಾ ಸರಿ. ನಿಮ್ಮಾನ್ನೂ ಅವಳು ಪೆದ್ದು ಅಂತ ಕರೆಯುವುದಿಲ್ಲ ತಾನೇ?

ನಾನು: ನನ್ನನ್ನು ಪ್ರಚಂಡ ಬುದ್ದಿವಂತ ಅಂತಾಳೆ. ನಮ್ಮ ರವಿಯ ವಿಷಯ ನಿಮಗೆ ಏನೂ ಗೊತ್ತಿಲ್ಲ; ಅವನನ್ನು ನೋಡಿದ್ದೇ ಜ್ನಾಪಕವಿಲ್ಲಾ ಅಂದ್ರಲ್ಲ. ಅವನು ಪ್ರತಿದಿನ ಬೆಳಿಗ್ಗೆ ಐದೋ, ಆರೋ..... ಒಂದೊಂದು ಸಾರಿ ಏಳು ಗಂತೇನೆ ಅಂದು ಕೊಂಡು ಬಿಡಿ; ಆದರೆ, ಅವನು ಬರುವುದಂತೂ ಬಹಳ ಗ್ಯಾರಂಟಿ. ಆದರೆ, ಅವನು ಇತೀಚೆಗೆ, ಸುಮಾರು ಎರಡು ತಿಂಗಳೇ ಆಗಿಹೋಯಿತು ಕಣ್ರೀ. ಬಂದೇ ಇಲ್ಲ.

ನೀವು: ಆಶ್ಚರ್ಯ! ಎರಡು ತಿಂಗಳಿಂದ ಬಂದೇ ಇಲ್ಲ ಅಂದರೆ, ಅವನು ಹವಾಯಿಗೋ, ಲಾಸ್ ವೇಗಸ್ಸಿಗೋ, ಮೆಕ್ಸಿಕೊಗೋ ಹೊರತು ಹೋಗಿರಬೇಕು ಕಣ್ರೀ! ಅವನಿಗೂ ರಜೆ ಬೇಕೇ ಬೇಕು ಅಲ್ಲವೇ?

ನಾನು: ನೀವು ಬರೀ ಶತ ಪೆದ್ದರಲ್ಲ; ಸಹಸ್ರ ಪೆದ್ದೋ, ಲಕ್ಷ ಪೆದ್ದೋ, ಕೋತಿ ಪೆದ್ದೋ ಇರಲೇ ಬೇಕು.

ನೀವು: ನನ್ನನ್ನು ಅಣಕಿಸಿದ್ದು ನಿಮಗೆ ಸಾಕಾಗಿದ್ದರೆ, ಆ ರವಿ ಹ್ಯಾಗಿದ್ದಾನೆ ಅಂತ ಸ್ವಲ್ಪ ಈ ಪೆದ್ದು ಪೆದ್ದೇಶ್ವರನಿಗೆ ಒಟ್ಟಾರೆ ಉತ್ತರವನ್ನು ಹೇಳಿ ಮೊದಲು.

ನಾನು: ಹಾಗೆ ಆಗಲಿ ಶ್ರೀ ಶ್ರೀ ಶ್ರೀ ಪೆದ್ದೇಶ್ವರ ಮಹಾ ಮಂಡಲಾಧೀಶ, ಮಠಾಧೀಶ ಸ್ವಾಮಿಗಳೇ, ರವಿ ಎಂದರೆ ಸೂರ್ಯ, ಭಾಸ್ಕರ, ಪ್ರಭಾಕರ, ದಿವಾಕರ, ದಿನಕರ ಇತ್ಯಾದಿ, ಇತ್ಯಾದಿ, ಇತ್ಯಾದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ