ಅಣು ಸಮಾಜ
ಕೆ. ಆರ್. ಎಸ್. ಮೂರ್ತಿ
ಎಲಕ್ಟ್ರಾಣಿ: ಹೊಟ್ಟೆಯಲಿ ಋಣ ವಿದ್ಯುತ್ಕೋಶ, ಬಲು ಚಿಕ್ಕ, ಅತಿ ಚಕ್ಯ, ಸಾಮಾನ್ಯವಾಗಿ ಗುಂಪಿನಲ್ಲಿ, ಕೆಲವೊಮ್ಮೆ ಒಬ್ಬರ ಹಿಂದೆ ಮತ್ತೊಬ್ಬರಂತೆ ಓಡುತ್ತ ವಿದ್ಯುತ್ತನ್ನು ಹರಿಸುವವಳು. ಪ್ರೋಟಣ್ಣನೆಂದರೆ ಅತಿ ಪ್ರಿಯವೋ ಎಂಬಂತೆ, ಒಬ್ಬರೋ, ಅನೇಕರೋ ಪ್ರದಕ್ಷಿಣೆ ಹಾಕುವ ಕಾಯಕ; ಸುಸ್ತೇ ಇಲ್ಲವೆಂಬಂತೆ ನಿರಂತರ ಪ್ರದಕ್ಷಿಣೆ.
ಪ್ರೋಟಣ್ಣ: ದೊಡ್ಡ ಹೊಟ್ಟೆ, ದೊಡ್ಡ ದೇಹ; ಧನ ವಿದ್ಯುತ್ಕೋಶ. ಎಲಕ್ಟ್ರಾಣಿಗೆ ಇವನೆಂದರೆ ಬಹಳ ಪ್ರಿಯ; ಒಬ್ಬನೆಯೋ, ಇತರ ಪ್ರೋಟಣ್ಣರ ಜೊತೆಯಲ್ಲೋ ಅಣುವಿನ ಕೇಂದ್ರದಲಿ ವಾಸ.
ನ್ಯೂತ್ರಾಣ: ನಿಮಗೆ ಪ್ರೋಟಣ್ಣನ ಬಗ್ಗೆ ಗೊತ್ತಿದ್ದರೆ, ಇವನು ಒಬ್ಬ ನಿತ್ರಾಣಿ ಷಂಡನೆಂಬುದನ್ನು ಬಿಟ್ಟರೆ, ಇನ್ನೇನೂ ವ್ಯತ್ಯಾಸವಿಲ್ಲ. ಇವನೂ, ಇತರ ನ್ಯೂತ್ರಾಣರ ಜೊತೆಯಲ್ಲೂ, ಪ್ರೋಟಣ್ಣರ ಜೊತೆಯಲ್ಲೂ ಅಣುವಿನ ಕೇಂದ್ರದಲ್ಲಿ ವಾಸ. ಇವನ ಹೊಟ್ಟೆಯಲ್ಲಿ ವಿದ್ಯುತ್ಕೋಶ, ಹಾಗೂ ಎಲಕ್ಟ್ರಾಣಿಯರನ್ನು ಸೆಳೆಯುವ ಶಕ್ತಿಯಿಲ್ಲದ ಬಲು ಷಂಡ.
ಫೋಟಾನಯ್ಯ: ಇವನನ್ನು ಬೆಳಕಿನ ಕಣ ಎನ್ನಬಹುದು. ಅನೇಕ ಫೋಟಾನಯ್ಯರು ದೊಡ್ಡ ಗುಂಪಿನಲ್ಲಿ ಅತಿ ವೇಗದಲ್ಲಿ ಧಾವಿಸಿ ಅಲೆ ಅಲೆಯಾಗಿ ಓಡಿದಾಗ ವಿವಿಧ ಬಣ್ಣಗಳ ಬೆಳಕುಗಳು ನಮ್ಮ ಕಣ್ಣಿಗೆ ಗೋಚರವಾಗುತ್ತವೆ.
ನ್ಯೂತ್ರಿನೋ: ವಿದ್ಯುತ್ರಾಣ ವಿಲ್ಲದ ಅತಿ ಚಿಕ್ಕ, ಬಹಳಷ್ಟು ವೇಗದಲ್ಲಿ ಯಾವ ಅಣು, ಪರಮಾಣುಗಳನ್ನೂ ಸಂಪರ್ಕಿಸದೆ ಎಲ್ಲೆಲ್ಲೂ ತೂರಿ ಓಡುತ್ತಿರುವ, ಯಾವಾಗಲೂ ಅಜೀವ ಬ್ರಹ್ಮಚಾರಿಯಂತೆ, ಅದೃಶ್ಯನಾಗಿ ಅಲೆದಾಡುವ ಪರಮಾಣು.
ಫೋನಾಣಯ್ಯ: ಶಬ್ದವನ್ನು ಒಂದು ಕಡೆಯಿಂದ ಇನ್ನೊಂದು ಎಡೆಗೆ ಒಯ್ಯುವವನೇ ಫೋನಾಣಯ್ಯ. ವಿಶೇಷವೆಂದರೆ, ಘನವಸ್ತುಗಳಲ್ಲಿ ಶಾಖವು ಪ್ರಸಾರವಾಗುವಾಗಲೂ ಫೋನಾಣಯ್ಯನೇ ಕಾರಣ ಎಂದು ಶಾಖ ವಿಜ್ಞಾನಿಗಳು ವಿವರಿಸುತ್ತಾರೆ.
ಕ್ವಾರ್ಕು: ಪ್ರೋಟಾಣಯ್ಯರ ಹಾಗೂ ನ್ಯೂತ್ರಾಣಯ್ಯರ ಹೊಟ್ಟೆಯಲ್ಲಿ ಕ್ವಾರ್ಕುಗಳು ಇವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಕ್ವಾರ್ಕುಗಳಲ್ಲಿ ಅನೇಕ ಜಾತಿ: ಒಟ್ಟು ಆರು ರೀತಿಯವು.
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ