ಮಂಗಳವಾರ, ಜನವರಿ 25, 2011

ಬೇಡ ಶಾಪ

ಬೇಡ ಶಾಪ
ಕೆ. ಆರ್. ಎಸ್. ಮೂರ್ತಿ

ಕೊಡದಿದ್ದರೆ ಬೇಡ ಹೋಗೋ ಹಾರುವಯ್ಯ
ಬೇಡ ನಾನೆಂದು ಬಿಲ್ಲು ಬಾಣದ ನಿನ್ನ ಶಿಷ್ಯ

ಹುಟ್ಟಿನಲಿ ಬೇಡ, ನನಗೇನೂ ಬೇಡ ಪಾಠ
ಬಿಟ್ಟೂ, ಬಿಟ್ಟೂ, ಗುರಿಯಿಟ್ಟೂ ಆಗುವೆ ನಿರತ

ಗುರುದಾನ ಕೇಳಿ, ಹೆಬ್ಬೆಟ್ಟ ಕಸಿದು ಕೊಂಡೆ
ಪಾರ್ಥನನು ಮೀರಿದವ ಇರಬಾರದೆಂದೇ

ಹೆಬ್ಬೆರಳು ಗೆದ್ದಿತು, ಶಿಷ್ಯನನು ಸೋಲಿಸುವ
ಇನ್ನೊಬ್ಬ ಶಿಷ್ಯನಾನು ಇರಬಾರದೆಂಬ ನೆವ

ಕೊಡುವೆನೋ ನಿನಗೆ ವರ ಶಾಪವೊಂದು
ಶಿಷ್ಯನೇ ನಿನ್ನ ಶತ್ರು, ಮೃತ್ಯುವಾಗಲೆಂದು

ಸಾಧಕರು

ಸಾಧಕರು
ಕೆ. ಆರ್. ಎಸ್. ಮೂರ್ತಿ

ಭೃಂಗದ ಬೆನ್ನೇರಿ ಬಂದ ಬೇಂದ್ರೆ.
ಭರ್ಜರಿ ಬೆಂದವರಿಗೆ ಮಾತ್ರ ಬೇಂದ್ರೆ

ಆಶು ಕವಿ, ಆಶು ವಾಕ್ ಪಟುವೆಂದರೆ
ಸದಾ ಸಿಧ್ಧ, ನೀ ತನನಾನ ಎಂದರೆ

ನಾರದನ ನಾಕೂ ತಂತಿ ಮೀಟಿದಂತೆ
ನಾರಾಯಣನನೇ ಶಯನದಿಂದೆದ್ದಂತೆ

ಗಂಗೆಯ ಇಳಿಸಿದ ಸಾಧನ ಕೇರಿಯ ಸಿಧ್ಧ
ಪದ ಲಾಲಿತ್ಯದ ಬುಧ್ಧಿವಂತರಲಿ ನೀ ಬುಧ್ಧ
--

ಭಾನುವಾರ, ಜನವರಿ 23, 2011

ಜೇನುಗನಸು

ಜೇನುಗನಸು
ಕೆ. ಆರ್. ಎಸ್. ಮೂರ್ತಿ

ಏರು ಬೇಗ ಬೆಡಗಿ; ಏರು ರೋಮಾಂಚನದ ಮಂಚಕ್ಕೆ ಮೈ ತಲುಕಿಸಿ
ನಾರಿ ನಿನಗಾಗೇ ಅಲಂಕರಸಿ ಕಾದಿಹೆ ಕುಸುಮಗಳ ಸುವಾಸನೆ ಸಿಂಚಿಸಿ

ಮಾರ ಶರವು ನಿನಗೆಂದೇ ಕಾದಿಹುದು ಕೆಂಪು ಕೆಂಡವಾಗಿ ಬೆಳೆದೂ ಬೆಳೆದೂ
ನರ ಮಂಡಲವೆಲ್ಲಾ ನೆಗೆದು ಏಳಕೊಂಡಿವೆ ಬಿಗಿಯಾಗಿ, ಸೆಟೆದೂ ಸೆಟೆದೂ

ಚಂದಿರನು ಕಾದಿಹನು ಹುಣ್ಣಿಮೆಯ ಹಾಲನ್ನು ಕೋಮಲೆ ನಿನಗೆ ಸ್ನಾನಕ್ಕೆಂದು
ಇಂದಿರನ ವದನೆಯರು ಕಾಮ ವರ್ಧಿನಿ ರಾಗದ ವಿಲಂಬಿತ ಆಲಾಪನೆಗೆಂದು

ದುಂಬಿಗಳ ಹಿಂಡು ಕೋಟಿ ಕೋಟಿ ನೂರಾರು ಮಲಿಗಳೇ ಹಾರಾಡಿ ವನವೆಲ್ಲಾ
ಕುಸುಮಗಳು ಅನೇಕಾನೇಕ ಮಧುವ ಧಾರೆ ಎರೆದಿವೆ ಬಣ್ಣ ಬಣ್ಣದ ಬಟ್ಟಲಲೆಲ್ಲಾ

ನಿನ್ನಧರಗಳೇ ಸವಿಯಲ್ಲವೇ ಜೇನಿನ ಸುಧಾಮೃತವನು ಸುರಿಸುವ ಕಾಮಧೇನು
ಹರಿಸುವುದು ಗಂಗಾಧಾರೆ, ರಭಸದಲಿ ಭೋರ್ಗರೆದು ಧಮನಿಯಲಿ ಆನಂದವನು

ಹೊಸತು ಹೊಸೆಯುವ, ಹಸಿವ ತಣಿಸುವ, ಆಸೆಗಳ ಬೆಸೆಯುವ, ಒಂದೇ ಕನಸ ಕಾಣುವ
ವಿನ್ಯಾಸದ ಲಾಸ್ಯವನಾಡುವ, ಬಂಧನದ ಭಾಷೆಯಾಡುವ, ನಿಮಿಷವನೇ ನಿಲ್ಲಿಸಿಬಿಡುವ

ಗುರುವಾರ, ಜನವರಿ 20, 2011

ತಿರುಕನ ನನಸು

ತಿರುಕನ ನನಸು
ಕೆ. ಆರ್. ಎಸ್. ಮೂರ್ತಿ

ಪೆದ್ದರಲಿ ಅತಿ ಪೆದ್ದ ದಡ್ಡರಲ್ಲೆಲ್ಲಾ, ಮಹಾ ದಡ್ಡನಾಗಬೇಕೆಂಬ ಅಸಾಮಾನ್ಯ ಬಯಕೆ
ಈ ಕ್ಷಣದಲ್ಲೇ ಸಿಧ್ಧನಾಗಿಹೆ ನಾನು, ಭಾವಿಗೆ ಹಾರಿ ಬಿದ್ದು ಪ್ರಾಣವನ್ನು ತ್ಯಜಿಸುವುದಕೆ

ಸತ್ತು, ಮುಂದಿನ ಜನುಮದಲಿ ಮತ್ತೆ ಆಗುವೆ ಪೆದ್ದೇಶ್ವರ ಚಕ್ರವರ್ತಿ, ಪೆದ್ದ ಗಂಡನಾಗಿ
ಹುಟ್ಟಿ ಮತ್ತೆ ಬರುವ ಮಹದಾಸೆಯಿದೆ; ಸಾಧ್ಯವೇ ಇಲ್ಲವೆನುವುದನು ಸಾಧಿಸುವೆ ದಿಟವಾಗಿ

ಪೆದ್ದನಾದರೇನಂತೆ, ತ್ರಿಪುರ ಸುಂದರಿ, ಅಪ್ರತಿಮ ಜಾಣೆ, ರಾಜ ಕುವರಿಯ ಬಲಗೈ ಹಿಡಿವೆ
ದಡ್ಡನಾದರೇನಂತೆ, ದೊಡ್ಡ ಅರಮನೆಯ ಅಂತಃಪುರದಲಿ ರಾಜಕುವರಿಯೊಡನೆಯೇ ಮಲಗುವೆ

ಫಕ್ಕನೆ ನಗಬೇಡಿ, ಇಂತಹ ಕನಸನು ತಿರುಕನ ಕನಸೆಂದು ಕಿಂಚಿತ್ತೂ ಹೀಯಾಳಿಸಲೇ ಬೇಡಿ
ಅಸಾಧ್ಯವು ಕೂಡ ಆಗಬಲ್ಲುದು, ಮೂರ್ಖನಿಗೂ ಗರವೊಮ್ಮೆ ಬಡಿಯಬಹುದು ಯೋಚಿಸಿನೋಡಿ

ರಾಜನ ಕಟ್ಟಪ್ಪಣೆಯಂತೆ ಧೂತರು ಕುದುರೆಯೇರಿ ಧಾವಿಸಿ ಬರುವಾಗ ಇಡೀ ನಗರದಲ್ಲೇ
ದೊಡ್ಡ ಮೂರ್ಖನನು ಹುಡುಕುತ್ತಿರುವಾಗ ನಾನು ಪ್ರತ್ಯಕ್ಷ ಅದೇ ಕಾಡಿನ ಅವರ ದಾರಿಯಲೇ

ಹತ್ತುವೆನು ಭರದಲ್ಲಿ ಕೈಲಿ ಕೊಡಲಿಯೊಂದನು ಹಿಡಿದು, ಏರುವೆನು ಅತಿ ಎತ್ತರದ ದೊಡ್ಡ ಮರವನ್ನು
ಕೊಂಬೆಯ ತುದಿಗೇರಿ, ಕೊಡಲಿಯ ಹೊಡೆದು ಕೂತ ಕೊಂಬೆಯನೇ ಕತ್ತರಿಸುವ ಯೋಜನೆ ಮಾಡುವೆನು

ಧೂತರಿಗಿಂತ ಪೆದ್ದನಂತೂ ನಾನಲ್ಲ; ಪೋಲೀಸು ಪ್ಯಾದೆಗಳಿಗಿಂತ ಪೆದ್ದರುಂಟೇ ಈ ಲೋಕದಲ್ಲಿ ಹೇಳಿ?
ಬಂಧಿಸಿ ಒಯ್ಯುವುದು ಖಂಡಿತವು ನನ್ನನ್ನು; ಮುಂದಿನ ಕಥೆಯನ್ನು ನೀವೇ ಕೇಳೋಣ ಬೇಗ ಬೇಗ ಹೇಳಿ!

ಕನ್ನಡತಿಗೆ ಉತ್ಸವ

ಕನ್ನಡತಿಗೆ ಉತ್ಸವ
ಕೆ. ಆರ್. ಎಸ್. ಮೂರ್ತಿ

ಅಕ್ಷರ ಮಾಲೆಯ ಪೋಣಿಸಿದ ಕಂಠೀ ಹಾರ
ಸುಗಂಧ, ಮಲ್ಲಿಗೆ, ಗುಲಾಬಿ, ಕನಕಾಂಬರ

ಸಿಂಪಡಿಸುವೆವು ಸಿರಿಗಂಧ, ಚಂದನ, ಪನ್ನೀರು
ನಿರಂತರ ಮೈಮೇಲೆಲ್ಲಾ ಪಸರಿಸುವ ತುಂತುರು

ರಂಗು ರಂಗಿನ ನಯ ರೇಶಿಮೆಯ ಸೀರೆ ಉಡಿಸಲು
ಪಚ್ಚೆ, ಸುವರ್ಣ, ರತ್ನ ಅಲಂಕರಿಸಿದ ಪಸಿರು ಶಾಲು

ಕಾವೇರಿಯೇ ಮಾಡಿಸುತಾಳೆ ನಿನಗೆ ನಿತ್ಯ ಸ್ನಾನ
ಜೋರಿನ ಜೋಗ ಜಲಪಾತದ ಭರದ ಅಭ್ಯಂಜನ

ದುಂಬಿಯ ತಂಬೂರಿಯ ಶೃತಿ ಗುನುಗುವ ತನನಾನ
ಕರುನಾಡಿನ ಗಿಣಿ, ಕೋಗಿಲೆ ವೃಂದದ ಆಲಾಪನ
ಸ್ವರನಾಡಿನ ಗಿಣಿ, ಕೋಗಿಲೆ ವೃಂದದ ಆಲಾಪನ

ಸಾವಿರ ನಯನದ ಸಾವಿರ ಮಯೂರಗಳ ಕುಣಿತ
ವಾನರ ಸೈನ್ಯದ ಹುರುಪಿನ ಕೇಕೆಯಾಟದ ನೆಗೆತ

ವೀಳ್ಯ ಲೇಪಿತ ಕೆಂಪೇರಿದ ತೊಂಡೆಯ ತುಟಿಯ ಬಾಯಿ
ನಡೆವಾಗ ಹಾದಿಯಲಿ ಕೋಟಿ ತೆಂಗಿನ ಈಡು ಕಾಯಿ

ಕನ್ನಡತಿ ಬಾರೇ, ಕಣ್ತುಂಬ ನೋಡಿ ಧನ್ಯವಾದೇವು
ಎಡೆ ಬಿಡದೆ ಉತ್ಸಾಹದ ಅಮ್ಮನುತ್ಸವವ ನಡೆಸುವೆವು

ಕನ್ನಡತಿಯೇ ಸರಸತಿ, ವಾಗ್ದೇವಿ, ಗಾನ ಶಾರದೆಯು
ಕನ್ನಡಕೇ ಮೀಸಲು ನಮ್ಮೆಲ್ಲರ ಗುಂಡಿಗೆಯ ಗುಡಿಯು

ಸೋಮವಾರ, ಜನವರಿ 10, 2011

ಅಣು ಸಮಾಜ

ಅಣು ಸಮಾಜ

ಕೆ. ಆರ್. ಎಸ್. ಮೂರ್ತಿ

ಎಲಕ್ಟ್ರಾಣಿ: ಹೊಟ್ಟೆಯಲಿ ಋಣ ವಿದ್ಯುತ್ಕೋಶ, ಬಲು ಚಿಕ್ಕ, ಅತಿ ಚಕ್ಯ, ಸಾಮಾನ್ಯವಾಗಿ ಗುಂಪಿನಲ್ಲಿ, ಕೆಲವೊಮ್ಮೆ ಒಬ್ಬರ ಹಿಂದೆ ಮತ್ತೊಬ್ಬರಂತೆ ಓಡುತ್ತ ವಿದ್ಯುತ್ತನ್ನು ಹರಿಸುವವಳು. ಪ್ರೋಟಣ್ಣನೆಂದರೆ ಅತಿ ಪ್ರಿಯವೋ ಎಂಬಂತೆ, ಒಬ್ಬರೋ, ಅನೇಕರೋ ಪ್ರದಕ್ಷಿಣೆ ಹಾಕುವ ಕಾಯಕ; ಸುಸ್ತೇ ಇಲ್ಲವೆಂಬಂತೆ ನಿರಂತರ ಪ್ರದಕ್ಷಿಣೆ.

ಪ್ರೋಟಣ್ಣ: ದೊಡ್ಡ ಹೊಟ್ಟೆ, ದೊಡ್ಡ ದೇಹ; ಧನ ವಿದ್ಯುತ್ಕೋಶ. ಎಲಕ್ಟ್ರಾಣಿಗೆ ಇವನೆಂದರೆ ಬಹಳ ಪ್ರಿಯ; ಒಬ್ಬನೆಯೋ, ಇತರ ಪ್ರೋಟಣ್ಣರ ಜೊತೆಯಲ್ಲೋ ಅಣುವಿನ ಕೇಂದ್ರದಲಿ ವಾಸ.

ನ್ಯೂತ್ರಾಣ: ನಿಮಗೆ ಪ್ರೋಟಣ್ಣನ ಬಗ್ಗೆ ಗೊತ್ತಿದ್ದರೆ, ಇವನು ಒಬ್ಬ ನಿತ್ರಾಣಿ ಷಂಡನೆಂಬುದನ್ನು ಬಿಟ್ಟರೆ, ಇನ್ನೇನೂ ವ್ಯತ್ಯಾಸವಿಲ್ಲ. ಇವನೂ, ಇತರ ನ್ಯೂತ್ರಾಣರ ಜೊತೆಯಲ್ಲೂ, ಪ್ರೋಟಣ್ಣರ ಜೊತೆಯಲ್ಲೂ ಅಣುವಿನ ಕೇಂದ್ರದಲ್ಲಿ ವಾಸ. ಇವನ ಹೊಟ್ಟೆಯಲ್ಲಿ ವಿದ್ಯುತ್ಕೋಶ, ಹಾಗೂ ಎಲಕ್ಟ್ರಾಣಿಯರನ್ನು ಸೆಳೆಯುವ ಶಕ್ತಿಯಿಲ್ಲದ ಬಲು ಷಂಡ.

ಫೋಟಾನಯ್ಯ: ಇವನನ್ನು ಬೆಳಕಿನ ಕಣ ಎನ್ನಬಹುದು. ಅನೇಕ ಫೋಟಾನಯ್ಯರು ದೊಡ್ಡ ಗುಂಪಿನಲ್ಲಿ ಅತಿ ವೇಗದಲ್ಲಿ ಧಾವಿಸಿ ಅಲೆ ಅಲೆಯಾಗಿ ಓಡಿದಾಗ ವಿವಿಧ ಬಣ್ಣಗಳ ಬೆಳಕುಗಳು ನಮ್ಮ ಕಣ್ಣಿಗೆ ಗೋಚರವಾಗುತ್ತವೆ.

ನ್ಯೂತ್ರಿನೋ: ವಿದ್ಯುತ್ರಾಣ ವಿಲ್ಲದ ಅತಿ ಚಿಕ್ಕ, ಬಹಳಷ್ಟು ವೇಗದಲ್ಲಿ ಯಾವ ಅಣು, ಪರಮಾಣುಗಳನ್ನೂ ಸಂಪರ್ಕಿಸದೆ ಎಲ್ಲೆಲ್ಲೂ ತೂರಿ ಓಡುತ್ತಿರುವ, ಯಾವಾಗಲೂ ಅಜೀವ ಬ್ರಹ್ಮಚಾರಿಯಂತೆ, ಅದೃಶ್ಯನಾಗಿ ಅಲೆದಾಡುವ ಪರಮಾಣು.

ಫೋನಾಣಯ್ಯ: ಶಬ್ದವನ್ನು ಒಂದು ಕಡೆಯಿಂದ ಇನ್ನೊಂದು ಎಡೆಗೆ ಒಯ್ಯುವವನೇ ಫೋನಾಣಯ್ಯ. ವಿಶೇಷವೆಂದರೆ, ಘನವಸ್ತುಗಳಲ್ಲಿ ಶಾಖವು ಪ್ರಸಾರವಾಗುವಾಗಲೂ ಫೋನಾಣಯ್ಯನೇ ಕಾರಣ ಎಂದು ಶಾಖ ವಿಜ್ಞಾನಿಗಳು ವಿವರಿಸುತ್ತಾರೆ.

ಕ್ವಾರ್ಕು: ಪ್ರೋಟಾಣಯ್ಯರ ಹಾಗೂ ನ್ಯೂತ್ರಾಣಯ್ಯರ ಹೊಟ್ಟೆಯಲ್ಲಿ ಕ್ವಾರ್ಕುಗಳು ಇವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಕ್ವಾರ್ಕುಗಳಲ್ಲಿ ಅನೇಕ ಜಾತಿ: ಒಟ್ಟು ಆರು ರೀತಿಯವು.

ನಮ್ಮ ರವಿಯನ್ನು ನೀವು ಇತೀಚೆಗೆ ನೋಡಿದ್ದೀರಾ?

ನಮ್ಮ ರವಿಯನ್ನು ನೀವು ಇತೀಚೆಗೆ ನೋಡಿದ್ದೀರಾ?
ಕೆ. ಆರ್. ಎಸ್. ಮೂರ್ತಿ

ನಾನು: ಇತ್ತೀಚಿಗೆ, ನೀವೇನಾದರೂ ನಮ್ಮ ರವಿಯನ್ನು ನೋಡಿದಿರಾ? ದಿನಾನೂ ಬರುತ್ತಿದ್ದವನು ಇತ್ತೇಚೆಗೆ ಏನೋ ಬರುತ್ತಲೇ ಇಲ್ಲ! ಏನ್ರೀ! ಅವನೇನಾದರೂ ರಜೆ ತೆಗೆದು ಕೊಂಡಿದ್ದಾನೇನು? ಅವನು ಹೀಗೆ ತಿಂಗಳಾನುಗಟ್ಟಲೆ ರಜೆ ತೆಗೆದುಕೊಂಡರೆ, ನಮ್ಮೆಲ್ಲರ ಗತಿಯೇನು? ಅವನಿಲ್ಲದಿದ್ದರೆ, ನಮ್ಮ ಜೀವನದಲ್ಲಿ ಕಪ್ಪು ಮೋಡ ಕವಿದು ಕೊಂಡ ಹಾಗೆ. ನನಗೇನೋ ಅವನಿಲ್ಲದಿದ್ದರೆ ಮೈಯಲ್ಲೆಲ್ಲಾ ಚಳಿ, ನಡುಕ ಬಂದು ಬಿಡುತ್ತದೆ.

ನೀವು: ಯಾರ್ರೀ ಅವನು? ಅವನ ಹೆಸರು ರವಿ ಅಂದಿರಾ? ಯಾರೋ ಅವನು ಹ್ಯಾಗಿದಾನೆ ಅಂತ ಜ್ಞಾಪಕ ಬರುತ್ತಿಲ್ಲವಲ್ಲ! ನಾನೂ, ನೀವೂ ನೋಡಿದ್ದು ಗ್ಯಾರಂಟಿ ತಾನೇ?

ನಾನು: ಏನ್ರೀ ನೀವು ಇಷ್ಟು ಪೆದ್ದು ಪೆದ್ದಾಗಿ ಮಾತಾಡ್ತಾ ಇದ್ದೀರಿ! ನಮ್ಮ ರವಿಯನ್ನು ನೋಡಿದ್ದು ಜ್ನಾಪಕವೇ ಇಲ್ಲಾ ಅಂತೀರಲ್ಲಾ! ನಾನೂ, ನೀವೂ, ಎಲ್ಲರೂ ನೋಡಿದ್ದೀವಿ ಸ್ವಾಮಿ!

ನೀವು: ನಾನು ಅಷ್ಟೊಂದು ಪೆದ್ದಾನೆನ್ರೀ? ಎಲ್ಲರೂ ನನ್ನನ್ನು ಪೆದ್ದಾ ಅಂತ ಒಂದೊಂದು ಸಾರಿ ಕರೆಯುವುದು, ನನ್ನನ್ನು ತಮಾಶಿ ಮಾಡಿ ಕೊಂಡು ನಗುವುದು ನನಗೂ ಗೊತ್ತು. ನನ್ನ ಹೆಂಡತಿ ಕೂಡ ನನ್ನನ್ನು, ಬೆಡ್ ರೂಮಿನಲ್ಲಿ ಶತ ಪೆದ್ದು ಅಂತ ಅಂತಾ ಇರ್ತಾಳೆ. ನನಗೆ ಏನೂ ಗೊತ್ತಿಲ್ಲಾ ಅಂತ ಅಣಕಿಸುತ್ತಾಳೆ; ಕಿಸಿ ಕಿಸೀ ಅಂತ ನಗುತ್ತಾಳೆ.

ನಾನು: ನಿಮ್ಮ ಹೆಂಡತಿ ನಿಮ್ಮನ್ನ ಪೆದ್ದು ಗುಂಡಾಂತ ಅಣಕಿಸಿ ನಗುವುದು ಊರಿಗೇ ಗೊತ್ತು. ನನ್ನ ಹತ್ರಾನೂ ಬಹಳ ಸಾರಿ ಹೇಳಿದ್ದಾಳೆ. ಅದೆಲ್ಲಾ, ನನ್ನ ಅವಳ ಗುಟ್ಟು; ಅದನ್ನು ನಿಮಗೆ ಹೇಳುವ ಹಾಗಿಲ್ಲ. ಅದಿರಲಿ ಬಿಡಿ. ಮುಖ್ಯ ವಿಷಯಕ್ಕೆ ಬನ್ನಿ.

ನೀವು: ಸರಿಯಪ್ಪಾ ಸರಿ. ನಿಮ್ಮಾನ್ನೂ ಅವಳು ಪೆದ್ದು ಅಂತ ಕರೆಯುವುದಿಲ್ಲ ತಾನೇ?

ನಾನು: ನನ್ನನ್ನು ಪ್ರಚಂಡ ಬುದ್ದಿವಂತ ಅಂತಾಳೆ. ನಮ್ಮ ರವಿಯ ವಿಷಯ ನಿಮಗೆ ಏನೂ ಗೊತ್ತಿಲ್ಲ; ಅವನನ್ನು ನೋಡಿದ್ದೇ ಜ್ನಾಪಕವಿಲ್ಲಾ ಅಂದ್ರಲ್ಲ. ಅವನು ಪ್ರತಿದಿನ ಬೆಳಿಗ್ಗೆ ಐದೋ, ಆರೋ..... ಒಂದೊಂದು ಸಾರಿ ಏಳು ಗಂತೇನೆ ಅಂದು ಕೊಂಡು ಬಿಡಿ; ಆದರೆ, ಅವನು ಬರುವುದಂತೂ ಬಹಳ ಗ್ಯಾರಂಟಿ. ಆದರೆ, ಅವನು ಇತೀಚೆಗೆ, ಸುಮಾರು ಎರಡು ತಿಂಗಳೇ ಆಗಿಹೋಯಿತು ಕಣ್ರೀ. ಬಂದೇ ಇಲ್ಲ.

ನೀವು: ಆಶ್ಚರ್ಯ! ಎರಡು ತಿಂಗಳಿಂದ ಬಂದೇ ಇಲ್ಲ ಅಂದರೆ, ಅವನು ಹವಾಯಿಗೋ, ಲಾಸ್ ವೇಗಸ್ಸಿಗೋ, ಮೆಕ್ಸಿಕೊಗೋ ಹೊರತು ಹೋಗಿರಬೇಕು ಕಣ್ರೀ! ಅವನಿಗೂ ರಜೆ ಬೇಕೇ ಬೇಕು ಅಲ್ಲವೇ?

ನಾನು: ನೀವು ಬರೀ ಶತ ಪೆದ್ದರಲ್ಲ; ಸಹಸ್ರ ಪೆದ್ದೋ, ಲಕ್ಷ ಪೆದ್ದೋ, ಕೋತಿ ಪೆದ್ದೋ ಇರಲೇ ಬೇಕು.

ನೀವು: ನನ್ನನ್ನು ಅಣಕಿಸಿದ್ದು ನಿಮಗೆ ಸಾಕಾಗಿದ್ದರೆ, ಆ ರವಿ ಹ್ಯಾಗಿದ್ದಾನೆ ಅಂತ ಸ್ವಲ್ಪ ಈ ಪೆದ್ದು ಪೆದ್ದೇಶ್ವರನಿಗೆ ಒಟ್ಟಾರೆ ಉತ್ತರವನ್ನು ಹೇಳಿ ಮೊದಲು.

ನಾನು: ಹಾಗೆ ಆಗಲಿ ಶ್ರೀ ಶ್ರೀ ಶ್ರೀ ಪೆದ್ದೇಶ್ವರ ಮಹಾ ಮಂಡಲಾಧೀಶ, ಮಠಾಧೀಶ ಸ್ವಾಮಿಗಳೇ, ರವಿ ಎಂದರೆ ಸೂರ್ಯ, ಭಾಸ್ಕರ, ಪ್ರಭಾಕರ, ದಿವಾಕರ, ದಿನಕರ ಇತ್ಯಾದಿ, ಇತ್ಯಾದಿ, ಇತ್ಯಾದಿ.

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು + ಕನ್ನಡಮ್ಮನಿಗೆ ಆರತಿಯ ಹಾಡು

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು + ಕನ್ನಡಮ್ಮನಿಗೆ ಆರತಿಯ ಹಾಡು ಕೆ. ಆರ್. ಎಸ್. ಮೂರ್ತಿ

ಪ್ರಿಯ ಕನ್ನಡ ಹಾಡುಗಾರರಿಗೆ:

ನಾನು ಈ ಕೆಳಗಿನ ಆರತಿಯ ಹಾಡನ್ನು ಕನ್ನಡ ಕಾರ್ಯ ಕ್ರಮದ ಸಂದರ್ಭಗಳಲ್ಲಿ ಕನ್ನಡ ಮಾತೆಗೆ ಆರತಿಯನ್ನು ಮಾಡುವಾಗ ಮುನ್ನೆಲೆ ಗಾಯಕರು ಹಾಡಿ, ಜೊತೆಗೆ ಹಿನ್ನೆಲೆ ಗಾಯಕರು ಗುಂಪಿನಲ್ಲಿ "ಆರತಿ ಇತ್ತೀರೆ / ಆರತಿ ಬೆಳಗೀರೆ + ಜೊತೆಗೆ ----- ಬೆಳಕಿನಾರತಿ, ಮಂಗಳಾರತಿ ಮುತ್ತಿನಾರತಿ, ಹೂವಿನಾರತಿ, ಗಂಧದಾರತಿ, ಕುಸುಮದಾರತಿ, ಸುತ್ತಿನಾರತಿ... ಇತ್ಯಾದಿಯಾಗಿ ಒಂದಾದ ಮೇಲೊಂದಾಗಿ ಹೇಳಬಹುದು. ಜೊತೆಗೆ ಕೊಳಲು, ವೀಣೆ, ಪಿಟೀಲು, ಮೃದಂಗ, ತಬಲಾ ಮೊದಲಾದ ವಾದ್ಯಗಳು, ತಾಳ, ಗೆಜ್ಜೆ, ಗಂಟೆ ಇತರರ ತಾಳ ಸಲಕರಣೆಗಳು ಉಪಯೋಗಿಸುವುದು ಸೂಕ್ತ. ನಿಮ್ಮ ಅನುಕೂಲಕ್ಕೆ ಅನುಯಾಯಿ ಪದ ಪಲ್ಲಟ ಮಾಡಿಕೊಳ್ಳಿ.

ನಿಮಗೆ ಇಷ್ಟವಾದ ರಾಗವನ್ನೋ, ರಾಗ ಮಾಲಿಕೆಯಾಗೋ ಹಾಕಿಕೊಂಡು ಹಾಡಬಹುದು. ಅಗತ್ಯವಿದ್ದರೆ, ನನಗೆ ಈಮೈಲ್ ಮಾಡಿದರೆ ಅಥವಾ ೪೦೮-೪೬೪-೩೩೩೩ ಗೆ ಫೋನು ಮಾಡಿದರೆ, ನಾನು ರಾಗ ಹಾಕಿ ನಿಮಗೆ ಕಳಿಸಿಕೊಡುತ್ತೇನೆ.

ಹೊಸ ಸೂಚನೆ ಮತ್ತು ನಿಮ್ಮ ಕೋರಿಕೆಗಳು:

ಆಗಲೇ, ಕೆಲವು ಕನ್ನಡಿಗರು ಹಾಗೂ ನನ್ನ ಸ್ನೇಹಿತರು, ತಮಗೆ ಪ್ರಿಯವಾದ ಹೆಸರಾಂತ ಕನ್ನಡಿಗರನ್ನು ಈ ಆರತಿಯ ಹಾಡಿನಲ್ಲಿ ಸೇರಿಸ ಬೇಕೆಂದು ಕೋರಿದ್ದಾರೆ. ನೀವು ಕೂಡ ನಿಮ್ಮ ಕೋರಿಕೆಗಳನ್ನು ನನಗೆ ಕಳಿಸಿ ಕೊಡಿ. ಇದುವರೆಗೂ ಬಂದಿರಿರುವ ಕೋರಿಕೆಗಳು ಈ ಕೆಳಗಿವೆ:
ಎಲ್ಲ ಕನ್ನಡದ ಜ್ಞಾನ ಪೀಠ ಪ್ರಶಸ್ತಿಗಾರರು
ವಿಶೇಶ್ವರಯ್ಯ
ಹಕ್ಕ, ಬುಕ್ಕ
ವಿಷ್ಣುವರ್ಧನ - ರಾಜ (ಸಿನಿಮಾ ನಟರಲ್ಲ)
ನಿಮ್ಮ ಕೋರಿಕೆಗೆ ಉದಾಹರಣೆಗಳು: ಸಂಗೀತಗಾರರು, ಶಿಲ್ಪಿಗಳು, ಇತರ ಕಲಾಕಾರರು, ಮಹಾ ಸಂತ, ಶರಣ, ಗುರು, ಸ್ವಾಮಿಗಳು, ತೀರ್ಥ ಯಾತ್ರಾಸ್ಥಳಗಳು, ಆಧ್ಯಾತ್ಮಿಕ ನೇತಾರರು (ಜೈನ, ಹಿಂದೂ, ಇತ್ಯಾದಿ), ವಿಜ್ಞಾನಿಗಳು, ಸಮಾಜ ಸೇವಕರು, ಇತರ ಹೆಸರಾಂತ ಸಾಹಿತಿಗಳು.

ಆರತಿಯ ಹಾಡು
ಕೆ. ಆರ್. ಎಸ್. ಮೂರ್ತಿ

ಬೆಳಗಿರೆ ಆರತಿಯ ಅರಳಿಸಿ ಚಿತ್ತವನು ಬೆಳಗುವ ಸರಸತಿಗೆ
ನಿತ್ಯ ಸತ್ಯ ಆರತಿಯ ಯತಿಗಳ ಮತಿಯಲ್ಲಿ ಹೊಳೆಯುವಳಿಗೆ

ಹೂವಿನಾರತಿಯನೆತ್ತಿರೆ ಕನ್ನಡಮ್ಮ ದೇವಿ ಭುವನೇಶ್ವರಿಗೆ
ಸುತ್ತಿನಾರತಿಯ ಎತ್ತಿರೆ ಶೃಂಗೇರಿ ಮಾತೆ ಶಾರದಾ ದೇವಿಗೆ

ತುಪ್ಪದಾರತಿಯ ಒಪ್ಪದಲಿ ಅರ್ಪಿಸಿ ಹೊಗಳಿರೆ ಸರ್ವಮಂಗಲೆಗೆ
ಸಿರಿ ಗಂಧದಾರತಿಯ ಚೆಂದದಲಿ ಮನ ಮಂದಿರದಲಿ ನಲಿವಳಿಗೆ

ವೀರ ನಾರಾಯಣನ ವರಿಸಿ ಕರುನಾಡಿನ ಗದಗಿನಲ್ಲಿ ನೆಲೆಸಿದವಳಿಗೆ
ಕಾವ್ಯದಾರತಿಯ ನಾರಣಪ್ಪ ಕುಮಾರ ವ್ಯಾಸನನು ಹರಸಿದವಳಿಗೆ

ನಮ್ಮೆಲ್ಲರ ಪೆರ್ಮೆ ಪಂಪ ಮಹಾಕವಿಯ ಪೆತ್ತು, ಪೊತ್ತು ಇತ್ತವಳಿಗೆ
ರನ್ನ, ಜನ್ನ, ರಾಘವಾಂಕ, ಹರಿಹರ, ಮಾದೇವಿ, ಬಸವಣ್ಣನಮ್ಮನಿಗೆ

ಕನ್ನಡದ ಕಂಪು ಕುವೆಂಪು, ಸರ್ವಜ್ಞ, ಎಲ್ಲಬಲ್ಲ ಮಂಕುತಿಮ್ಮನಮ್ಮನಿಗೆ
ಬೆಂದು ಅಮೃತವಾದ ಬೇಂದ್ರೆ, ಕಾರ್ನಾಡರ ಮಡಿಲಲ್ಲಿ ಆಡಿಸಿದವಳಿಗೆ
,
ತಲಕಾಡಿನ ಕಾವೇರಿಯ ತೀರ್ಥ, ಮೈಸೂರಿನ ಸುವಾಸನೆಯ ಮಲ್ಲಿಗೆ
ಗಂಧ, ಚಂದನ ಲೇಪನ, ಶಾಂತಲೆಯ ನರ್ತನ, ಕೋಗಿಲೆಯ ಗಾನಕ್ಕೆ

ಕಾದು ಬಂದಿಹಳು ನಮ್ಮೆಲ್ಲರ ಹೊತ್ತು ಸಲಹಿದ ಅಕ್ಕರೆಯ ಅಮ್ಮನಿಗೆ
ಎದೆಯಿಂದ ತುಂಬಿ ಬಂದ ಕರುಳಿನ ಕರೆಯಿಂದ ಆರತಿ ಕನ್ನಡಮ್ಮನಿಗೆ

ವಿಧ ವಿಧವಾಗಿ ಇದ್ದವರು; ನೀವ್ಯಾರು?

ವಿಧ ವಿಧವಾಗಿ ಇದ್ದವರು; ನೀವ್ಯಾರು?
ಕೆ. ಆರ್. ಎಸ್. ಮೂರ್ತಿ

ಇದ್ದವರು, ಇರುವವರು, ಬರುವವರು;
ಗೆದ್ದವರು, ಬಿದ್ದವರು, ಬಿದ್ದು ಎದ್ದವರು;
ಕದ್ದವರು, ಮೆದ್ದವರು, ಕದ್ದು ಮೆದ್ದವರು;
ಕಳೆದುಕೊಂಡವರು, ಉಳಿಸಿಕೊಂಡವರು, ಬೆಳೆಸಿಕೊಂಡವರು;

ಕಂಡವರು, ಕುರುಡರು, ಓದಿದವರು;
ಓಡಿದವರು, ಕಾಡಿಗೆ ಓಡಿದವರು, ಗುಡ್ಡವನೇರಿದವರು, ಗುಹೆಯ ಸೇರಿದವರು,
ಬೇಡಿದವರು, ಕಾಡಿದವರು,
ಸಿಧ್ಧರು, ಸಂತರು, ಅವಧೂತರು, ಬೂದಿಯಲಿ ಮಿಂದವರು,
ಗಿಡ್ದರು, ಗಡ್ಡದವರು, ಮಡಿದವರು, ಮಾಡಿದವರು, ಮಾಡಿ ಮಡಿದವರು;

ದೊಡ್ಡ ಕುಂಡಿಯವರು, ದಡ್ಡರು, ಭಂಡರು,
ಚಂಡಿಯರು, ಚಿಕ್ಕ ಚಡ್ಡಿಯವರು;
ಸತ್ತವರು, ಬೇಸತ್ತವರು, ವೈಡೂರ್ಯ ಪಡೆದವರು;
ವಡ್ಡರು; ತಿದ್ದುವವರು, ತಿದ್ದಿಕೊಂಡವರು;

ತಿಂಡಿಗೆ ಬೋಂಡ ತಿಂದವರು, ಬೂಂದಿ ತಿಂದವರು,
ಮಿಂದವರು, ಮಿಂದದೆಯೇ ತಿಂದವರು;

ಗುದ್ದಿದವರು, ಗುದ್ದಿಸಿಕೊಂದವರು, ಗುದ್ದಿಸಿಕೊಂಡವರು,
ಮುದ್ದಿಸಿದವರು, ಮುದ್ದಿಸಿಕೊಂಡವರು, ಮುದ್ದು, ಮುದ್ದು ಮಾಡಿ ಕೊಂದವರು;

ಅಂಡ ಆಟವಾಡಿದವರು, ರಂಭೆ ಅನಿಸಿ ಕೊಂಡವರು, ರಂಭೆ ಅನಿಸಿ ಕೊಂಡಿದ್ದೂ ರಂಡೆಯಾವರು,
ರಂಡೆಯಾಗಿ ಮುಂಡೆಯಾದವರು, ಮುಂಡೆಯಾಗಿ ಮುಂಡೆ ಬೋಳಿಸಿಕೊಂಡವರು,
ಮುಂಡೆಯಾದರೂ ಮುಂಡೆ ಉಳಿಸಿಕೊಂಡವರು, ಗುಂಡು ಕುಂಡೆ ಬೆಳೆಸಿಕೊಂಡವರು;

ಗುಂಡು ಕುಡಿದವರು, ಗುಂಡು ಕುಡಿದು ಅಳಿಸಿಹೋದವರು, ಮದ್ದು ತಿಂದವರು;
ಮಡಿ ಮಡಿಯಾಗಿ ಗುಂಡು ಕುಡಿದವರು;
ಚೆಂಡು ಆಡಿದವರು, ಗುಂಡು ಕುಡಿದು ರಂಡೆಯ ಗುಂಡು ಚೆಂಡಾಡಿದವರು........

ಮುಗಿಯದ ವಿಧ, ವಿಧದವರು.

ನೀವು ಇವಲ್ಲಿ ಇರಲೇಬೇಕಲ್ಲವೇ?
ಇವಲ್ಲದೆಯೇ ಬಲು ವಿಧವಿರಲೇ ಬೇಕಲ್ಲವೇ? ಅರಸಿ, ಆರಿಸಿಕೊಳ್ಳಿ; ಬೇಕಾದದ್ದು ಆರಿಸಿಕೊಳ್ಳಿ;
ನಿಮ್ಮರಸ, ನಿಮ್ಮರಸಿ ಅರಸಿದ ಮೇಲೆ ಎಲ್ಲಾ ಬರೆದುಕೊಳ್ಳಿ; ಒಂದು ಕಡೆ ಒಪ್ಪವಾಗಿ ಬರೆದುಕೊಳ್ಳಿ;
ಅವರಿವರು ಯಾರಾದರೂ ಏನೇನು ಅರಸಿ, ಆರಿಸಿ ಬರೆದುಕೊಂಡಿರಬಹುದು?
ಚೆನ್ನಾಗಿ ಯೋಚಿಸಿ ನೋಡಿ!