ಭಾನುವಾರ, ನವೆಂಬರ್ 7, 2010

ಅಂಟಿದ ನೆಂಟು

ಅಂಟಿದ ನೆಂಟು
ಕೆ. ಆರ್. ಎಸ್. ಮೂರ್ತಿ

ಹುಟ್ಟಿನಿಂದಲೇ ಅಂಟಿಕೊಳ್ಳುವುದಯ್ಯಾ ನೆಂಟರಿಷ್ಟರ ಅಂಟು
ಹುಟ್ಟಿಗೆ ಮುಂಚೆಯೇ ಜೀವ ಕೊಟ್ಟವಳ ಹೊಟ್ಟೆಯಲಿ ಗಂಟು

ಅವಳ ಧಮನಿಯ ಧರ, ಧರ ರಕ್ತದ ಧಾರೆ ರಾಗದ ಸೆರೆ ಹಾಕಿ
ಹೊಕ್ಕಳ ಬಳ್ಳಿಯ ಜೊತೆಯೇ ಹೊರಬಿದ್ದು, ಅತ್ತು ಬಿಕ್ಕಿ, ಬಿಕ್ಕಿ

ತುಂಬು ನಿತಂಬದ ಅಂಬನು ಹೀರಿ, ಉಂಡಿದ್ದು ರುಚಿಯಲ್ಲವೇ?
ಪ್ರತಿ ಗುಟುಕನ್ನೂ, ಗಟ, ಗಟ ಕುಡಿದು, ತೇಗಿದ್ದು ನೆನಪಿದೆಯೇ?

ಅವಳ ಅಪ್ಪುಗೆ, ಬೆಪ್ಪು ನಿನಗೆ ತಿಳಿಯದಿರದು ಅಬಲೆಯ ದೊಡ್ಡ ಬಲೆ
ಒಂದೊಂದರಂತೆ ಇಹದ ಪ್ರತಿ ಸೆಳೆತವೂ ಹಿಡಿದು ಹಾಕಿತ್ತು ಜಾಲೇ

ಅನುಜ, ಅನುಯಾಯಿ, ಒಡನಾಟಿ, ಮನವ ಅಪಹರಿಸಿದ ಕೊಮಲೆಯರೆಲ್ಲ
ಹೊಸ, ಹೊಸ, ಬಂಧನಗಳ ಹೊಸೆದಾಯ್ತು, ಕಳಚಿ ಹೊರ ಬರುವ ಬಗೆಯಿಲ್ಲ

ಉಸಿರು, ಉಸಿರಿಗೂ, ಬಸಿರಿನಿಂದಲೇ ನಿನ್ನ ಹಿಂಬಾಲಿಸಿತು ಭವದ ಬೇತಾಳ
ವಾಸನೆಯು ಬಿಗಿಯಾಗಿ ನೀ ಸಿಕ್ಕಿಯಾಯ್ತು ತೀರಿಸು ಜೀವ ಸವೆಸುತಾ ಸಾಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ