ಭಾನುವಾರ, ನವೆಂಬರ್ 7, 2010

ಆನೇ

ಆನೇ
ಕೆ. ಆರ್. ಎಸ್. ಮೂರ್ತಿ

ಆನೇ ಕಿವಿ, ಆನೇ ಕಣ್ಣು, ಆನೇ ತಲೆ, ಆನೇ ಚರಣ, ಆನೇ ಕರಣ.
ಆನೇ ಹಲ್ಲು, ಆನೇ ಜೊಲ್ಲು, ಆನೇ ಲಂಬೋದರ, ಲಂಬ ನಾಸಿಕ

ಆನೇ ತದೇಕ ಚಿತ್ತವು, ಅತ್ತಿತ್ತ ಸುತ್ತಾಡುವ ಕೋತಿ ಮನವೂ ಆನೇ
ಆನೇ ಅತಿ ಉದಾರ ದಾನಿಯು, ಕೈ ಪಿಡಿದು ಬೇಡುವವನೂ ಆನೇ

ಆನೇ ಕತ್ತಲು, ಬೆಳಕೂ ಆನೇ; ಆನೇ ಮಳೆಯೂ, ಬೆಳೆಯೂ ಆನೇ
ಆನೇ ನದಿ, ಸಾಗರಗಳು; ಬೀಸುವ ಗಾಳಿ, ಮಾರುತಗಳೂ ಆನೇ

ಆನೇ ಭವನ, ಭುವನವೂ ಆನೇ; ಆನೇ ಬಾನು, ಭಾನುವೂ ಆನೇ
ಸಕಲ ಗ್ರಹಗಳೂ ಆನೇ; ಅನೇಕಾನೇಕ ನೋವ, ತಾರೆಗಳೂ ಆನೇ

ಆನೇ ಸರಸ, ವಿರಸವೂ ಆನೇ; ಸಕಲ ರಸ, ಭಾವ, ಅನುಭವವೂ ಆನೇ
ಆನೇ ನೀರಸ ವಿರಕ್ತಿಯೂ; ರಾಗ ರಹಿತ, ಸುಖ, ದುಖ ನಿರ್ವಿಭಾವ ಆನೇ

ಹುಟ್ಟಿಸುವನು ಆನೇ, ಸುಡುವವನೂ ಆನೇ; ಪೊರೆಯುವವನು ಆನೇ
ಬೆಳೆಸುವವನೂ ಆನೇ, ಉಳಿಸುವವನೂ ಆನೇ, ಅಳಿಸುವನೂ ಆನೇ

ಆನೇ ಸತ್ಯ, ಅಸತ್ಯವೂ ಆನೇ; ಆನೇ ಮಿಥ್ಯ, ನಿತ್ಯ ಸತ್ಯವೂ ಆನೇ
ಆನೇ ಭಯ, ಭಕ್ತಿಯಲಿ ಭಜಿಪನೂ, ಪೂಜಿಸಿಕೊಳ್ಳುವವನೂ ಆನೇ

ಆನೇ ಹೊರಗೂ, ಆನೇ ಒಳಗೂ; ಇಳೆಯಲೆಲ್ಲ, ಇಹದಲ್ಲೆಲ್ಲೆಲ್ಲಾ ಆನೇ
ಆನೇ ಅಣು; ಎಲಕ್ಟ್ರಾಣುವೂ, ಪ್ರೋಟಾನೂ, ನ್ಯೂಟ್ರಾನುಗಳೂ ಆನೇ

ಆನಿಲ್ಲದಿಲ್ಲ, ಆನೇ ಎಲ್ಲ, ಹಿಂದು, ಮುಂದು, ಎಂದೂ ಇರುವುದೂ ಆನೇ
ಆನೆಲ್ಲೂ ಇಲ್ಲ, ಆನೆಲ್ಲೂ ಇರಬಲ್ಲ, ಅನೇಕಾನೇಕ ಅನುಮಾನವೂ ಆನೇ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ