ಶುಕ್ರವಾರ, ಸೆಪ್ಟೆಂಬರ್ 3, 2010

ಸೂತ್ರಧಾರನ ಕಿರು ಘೋಷಣೆ:

ಸೂತ್ರಧಾರನ ಕಿರು ಘೋಷಣೆ:

(ಈ ಕೆಳಗಿನ ಸೂತ್ರಧಾರನ ಮಾತುಗಳು ಘೋಷಣೆಯ ಪರಿಯಲ್ಲಿ, ಜೋರು ಕಂಠದಲ್ಲಿ ಇರಬೇಕು. ಎಲ್ಲ ದಿಕ್ಕಿಗೂ ತಿರುಗುತ್ತಾ ಎಲ್ಲರನ್ನೂ ದೃಷ್ಟಿಸಿ ನೋಡುವಂತೆ, ನೇರವಾಗಿ ನೆರೆದವರಿಗೆ ಹೇಳುವಂತೆ, ಸ್ವಲ್ಪ ಅತ್ತಿತ್ತ ನಡೆದು, ಸುತ್ತಿ ಘೋಷಿಸ ಬೇಕು)
(ಈ ಘೋಷಣೆ ಮಾಡುತ್ತಿರುವಾಗ, ಮಧ್ಯೆ, ಮಧ್ಯೆ ಒಬ್ಬರು ವಿಧವಿಧವಾಗಿ ತಮಟೆಯೊಂದನ್ನು ಹೊಡೆಯಬೇಕು, ಜೊತೆಗೆ ಹಾಂ, ಹೂಂ. ಇತ್ಯಾದಿ ಹೂಂ ಗೊಡುತ್ತಿದ್ದರೆ ಬಹಳ ಚೆನ್ನ)

ಕೇಳ್ರಪ್ಪಾ ಕೇಳಿ (ತಮಟೆ), ಕಿವಿ ನೆಟ್ಟಗೆ ಮಾಡಿಕೊಂಡು, ಸರಿಯಾಗಿ ಕೇಳಿ. (ತಮಟೆ), ನಿಮಗೋಸ್ಕರಾನೆ ನಾವೆಲ್ಲಾ ಒಂದು ನಾಟಕ ಮಾಡ್ತಿದೀವಿ. (ತಮಟೆ) ನಮ್ಮ ನಾಟಕ, ಬರೀ ನಾಟಕವಲ್ಲ. (ತಮಟೆ), ನಿಮ್ಮ ಹಳಿಯ ಕಥೆಯೇ ಇದು; (ತಮಟೆ), ನಮ್ಮ ಊರಿನ ಕಥೆಯೂ ಹೌದು; ನಮ್ಮ ರಾಜ್ಯದ ಕಥೆ, ನಮ್ಮ ದೇಶದ ಕಥೆಯೂ ಕೂಡ ಇದೇ!(ತಮಟೆ),

ಎಲ್ಲಿ ನೋಡೋಣ! ಒಂದು ಸಾರಿ ಜೋರಾಗಿ ಕೂಗಿ, ಬಹಳ ಜೋರಾಗಿ ಕೈ ತಟ್ಟಿ ಚಪ್ಪಾಳೆ ತಟ್ಟಿ.(ಈಗ ಕೊನೆಯದಾಗಿ ತಮಟೆ),

(ಇದರ ನಂತರ, ಸೂತ್ರಧಾರನು ಹಿಂದೆ, ಹೆಂದೆ ಹೆಜ್ಜೆ ಇಟ್ಟು ಕೊಂಡು ಅಥವಾ ಒಂದು ಸಾರಿ ಬೇಗ ಸುತ್ತಿ ನೆರೆದವರೊಡನೆ ಬೆರೆತು ಬಿಡಬೇಕು)

(ನಂತರ, ಸ್ವಲ್ಪವೂ ತಡವಿಲ್ಲದೆ ನಾಟಕ ಪ್ರಾರಂಭ.)

ಬರುತಿದೆ ನೋಡಿ ನಮ್ಮ ಬೀದಿ ನಾಟಕದ ದಂಡು

ಬರುತಿದೆ ನೋಡಿ ನಮ್ಮ ಬೀದಿ ನಾಟಕದ ದಂಡು
ಕೆ. ಆರ್. ಎಸ್. ಮೂರ್ತಿ

ನೀವು ನಿಂತಲ್ಲೇ ನಿಲ್ಲಿ, ಕುಂತಲ್ಲೇ ಕೂರಿ, ನಾವು ಈಗಲೇ ಆಡುವೆವು ನಿಮ್ಮ ಮುಂದೆ ನಾಟಕ
ನೀವು ಇದ್ದಲ್ಲೇ ನಮಗದು ರಾಜ ಬೀದಿ, ಬೇಗಲೇ ಹೂಡುವೆವು ಹಾಡಿ ಕುಣಿದು ಬೀದಿ ನಾಟಕ

ನಮ್ಮ ಊರಿನ, ನಿಮ್ಮ ಹಳ್ಳಿಯ, ಅವರ, ಇವರ ಮನೆಯ ಕಥೆಯೆಲ್ಲಾ ಸಾಕು ನಮ್ಮ ಕುಣಿತಕ್ಕೆ
ಬಿಡಿಗಾಸಿದ್ದಾರೆ ಸಾಕು ನಾವಿರುವುದೇ ಆಗಾಗ ನಿಮ್ಮ ಮನವನೆಲ್ಲಾ ಥೈ ತಕ ಥೈ ಕುಣಿಸೋದಕ್ಕೆ

ಹಾದಿ ಬಿಡಿ, ಹಾದಿ ಬಿಡಿ ನಿಮ್ಮ ವಠಾರದ ಹಾದಿ ಬಿಡಿ, ನಮ್ಮ ಬೀದಿ ಹೈಕಳೆಲ್ಲಾ ಬಂದರು ನೋಡಿ
ನಿಮಗೆಲ್ಲಾ ನಗು ಬಂದರೆ ಚೆನ್ನಾಗಿ ನಕ್ಕು ಬಿಡಿ, ತಟ್ಟಿ ಚಪ್ಪಾಳೆ ಕೈಸೇರಿಸಿ ಗಟ್ಟಿಯಾಗಿ ತಟ್ಟಿ ಬಿಡಿ

ಕೆಂಚಣ್ಣ, ಲಿಂಗಣ್ಣ, ಮುನಿಯಪ್ಪ, ಮಾದಪ್ಪ, ನೀವೆಲ್ಲಾ ಸೇರಿ ಹೊಡೀರೋ ಜೋರು ಜೋರಾಗಿ ಶೀಟಿ
ಗುಂಡಮ್ಮ, ನಾಗಮ್ಮ, ಸೀತಮ್ಮ, ನಂಜಮ್ಮ, ನಿಮ್ಮ ಕಿಲ, ಕಿಲ ನಗುವಿಂದಲೇ ನಮ್ಮೆಲ್ಲರ ಬೆನ್ನು ತಟ್ಟಿ

ಸೋಮವಾರ, ಆಗಸ್ಟ್ 30, 2010

ಹೇ ದೇವರೇ! ನಿನ್ನ ಗುಟ್ಟೇನು?

ಹೇ ದೇವರೇ! ನಿನ್ನ ಗುಟ್ಟೇನು?
ಕೆ. ಆರ್. ಎಸ್. ಮೂರ್ತಿ

ಮನುಷ್ಯನಿಗೆ ನಿನ್ನ ಹುಚ್ಚು ಹೇಗೆ ಹಿಡಿಯಿತು? ಏಕೆ ಹಿಡಿಯಿತು? ಯಾವಾಗ ಹಿಡಿಯಿತು?

ಇದು ಸಾಮಾನ್ಯ ಹುಚ್ಚಲ್ಲ. ವಿಪರೀತ ಹುಚ್ಚು. ಔಷಧಿಯೇ ಇಲ್ಲದ ಹುಚ್ಚು.

ಅವತಾರ ಎತ್ತುವನು ನೀನಲ್ಲ, ದೇವರೇ! ಆಚಾರದ ಅವತಾರಗಳು ಅನೇಕ. ಕೆಲವು ದೇಶಗಳು ದೇವರನ್ನು ಹುಟ್ಟಿಸಿದರೆ, ಇನ್ನು ಕೆಲವು ದೇಶದವರು ತಮ್ಮ ದೇಶದ ಮೇಲೆ ಇನ್ನೊಂದು ದೇಶದಲ್ಲಿ ಅವತಾರ ಮಾಡಿ ತಮ್ಮ ಮೇಲೆ ದಾಳಿ ಮಾಡುವವರೆಗೂ, ಸುಮ್ಮನಿರುತ್ತಾರೆ. ನಮ್ಮ ದೇಶದಲ್ಲಿ ಮಾತ್ರ ದೇವರುಗಳನ್ನು ಅವತರಿಸಲು ಅನೇಕ ದೊಡ್ಡ ಕಾರ್ಖಾನೆಗಳನ್ನೇ ನಿರ್ಮಿಸಿಬಿಟ್ಟರು. ಮೊದಲಿಗರು ಋಷಿಗಳಾದರೆ ಅವರು ಮೂವತ್ತು ಮೂರು ಕೋಟಿ ದೇವರುಗಳನ್ನು ಹುಟ್ಟಿಸಿಬಿಟ್ಟರು. ಜೊತೆಗೆ ಕೋಟಿ, ಕೋಟಿ ಗುರುಗಳೂ, ಸಾಧುಗಳೂ, ಸ್ವಾಮಿಗಳೂ, ಕಳ್ಳ ಸನ್ಯಾಸಿಗಳೂ, ಜಗದ್ಗುರುಗಳೂ ಹುಟ್ಟಿಬಿಟ್ಟರು, ಇನ್ನೂ ಹುಟ್ಟುತ್ತಲೇ ಇದ್ದಾರೆ. ಜಗಕ್ಕೆ ಒಬ್ಬರು ಸಾಲದಂತೆ ಅನೇಕ ಜಗದ್ಗುರುಗಳು ಸಿಂಹಾಸನವನ್ನು ಏರಿದರು.
,
ಭೂಮಿಯಮೇಲೆ ಮಾತ್ರ ದೇವರುಗಳು ಯಾಕೆ? ಕೋಟಿ, ಕೋಟಿ ಸೂರ್ಯನ ತರಹದ ತಾರೆಗಳು, ಗ್ರಹ, ಉಪಗ್ರಹಗಳು, ತಾರಾಮಂಡಲಗಳು, ಗ್ಯಾಲಾಕ್ಸಿಗಳೂ ಇರುವಾಗ, ನೀನು, ಅಥವಾ ನಿನ್ನಂತೆ ಕೋಟಿ, ಕೋಟಿ ದೇವರುಗಳು ಬ್ರಹ್ಮಾಂಡದಲ್ಲೆಲ್ಲಾ ಇದ್ದಾರೆಯೇ?

ಭೂಮಿಯ ಮೇಲೆ, ಇತರ ಪ್ರಾಣಿಗಳೂ, ಹಕ್ಕಿ, ಪಕ್ಷಿಗಳೂ, ಕ್ರಿಮಿ, ಕೀಟಗಳೂ, ಜಲಚರಗಳೂ, ಗಿಡ ಮರಗಳೂ ಸುಮ್ಮನೆ ತಮ್ಮ ಪಾಡಿಗೆ ತಾವು ಇರಬೇಕಾದರೆ, ಮನುಷ್ಯನೇಕೆ ನಿನಗೆ ಪೂಜೆ ಮಾಡುತ್ತಾನೆ? ಜಪ ಮಾಡುತ್ತಾನೆ? ವ್ರತ ಮಾಡುತ್ತಾನೆ, ಭಜನೆಗಳನ್ನು ಮಾಡುತ್ತಾನೆ?

ಓಹೋ! ಇದಕ್ಕೆಲ್ಲಾ ಒಂದೇ ಪದದ ಉತ್ತರವಿದೆಯೋ? ಕಕಲಾತಿ, ಪೆದ್ದುತನ, ಮೂರ್ಖತನ. ಇದೆಲ್ಲಾ ಹುಚ್ಚಿನ ಬೇರೆ, ಬೇರೆ ಪರಿಣಾಮಗಳೋ? ನಮ್ಮ ಭೂಮಿಯು ಒಂದು ದೊಡ್ಡ ಹುಚ್ಚಾಸ್ಪತ್ರೆಯೋ? ಡಾಕ್ಟರು ಮಾತ್ರ ಇಲ್ಲವೋ?

ಹಾಗಾದರೆ, ನೀನೇಕೆ ಇವರಿಗೆಲ್ಲಾ ಈ ರೀತಿ ಹುಚ್ಚು ಹಿಡಿಸಿ, ಸುಮ್ಮನೆ ಯಾಕೆ ಮೂಕನಾಗಿದ್ದೀಯೇ?

ಈ ತಮಾಷೆಯನ್ನೆಲ್ಲಾ ನೋಡಿಕೊಂಡು ನೀವೆಲ್ಲಾ ನಗುತ್ತೀರೆ? ನಿನಗೆ ಮತ್ತು ನಿನ್ನ ಮೂವತ್ತು ಮೂರು ಕೋಟಿ ಸಂಸಾರಕ್ಕೆ ಇದು ಮನೋರಂಜನೆಯೇ?

ಸರಿ ದೇವರೇ! ಈ ಗುಟ್ಟು ನಮ್ಮಲ್ಲೇ ಇರಲಿ. ಬಿಟ್ಟಿ ಮನೋರಂಜನೆಗಳು ನಡೆದು ಕೊಂಡು ಹೋಗುತ್ತಿರಲಿ.

ಬೈ, ಬೈ - ಅಥವಾ ಜೈ, ಜೈ!

ಅನ್ವರ್ಥ ನಾಮ

ಅನ್ವರ್ಥ ನಾಮ
ಕೆ. ಆರ್. ಎಸ್. ಮೂರ್ತಿ

ರಾಮನಿಗೆ ಹೆಸರಿತ್ತವರು ಯಾರಿರಬೇಕು?
ತಂದೆ ದಶರಥನೇ? ತಾಯಿ ಕೌಸಲ್ಯೆಯೇ?
ರಾಜ ಪುರೋಹಿತನೆ? ಇನ್ಯಾರಾದರೂ ಋಷಿಯೇ?

ಉತ್ತರ ಅತಿ ಸುಲಭ: ಒಬ್ಬ ಋಷಿ, ಮಹಾ ಋಷಿ
ಆ ಋಷಿಯ ಹೆಸರೂ ಅನ್ವರ್ಥ ನಾಮವೇ?
ಅವನು ದಶರಥನ ಕುಮಾರನಿಗಿಟ್ಟ ಹೆಸರೂ ಅಷ್ಟೇ!

ವಲ್ಮಿಕದಿಂದ ಪುನರ್ಜನ್ಮ ಪಡೆದವನು ವಾಲ್ಮೀಕಿ
ರಾಮನಿಗೆ ಜನ್ಮ ಕೊಟ್ಟವನೂ ಕೂಡ ವಾಲ್ಮೀಕಿಯೇ!
ರಾಮನ ಕಥೆಗೆ ತನ್ನ ಹೃದಯದಲ್ಲಿ ಜನ್ಮ ಕೊಟ್ಟ ಮಹಾಕವಿ;
ನಾವು, ನೀವೆಲ್ಲಾ ಇವನ ಕಥೆಯನ್ನು ಸಂಪೂರ್ಣ ನಂಬಿ,
ದೇಗುಲಗಳಲ್ಲಿ ಕಥೆಯ ನಾಯಕನನ್ನು ಕಲ್ಲಿನಲ್ಲಿ ಕೆತ್ತಿ,
ಮನೆಯಲ್ಲಿ ಪುಟ್ಟ ವಿಗ್ರಹಗಳನ್ನು ಇಟ್ಟು ಪೂಜಿಸುವಂತೆ
ಮಾಡಿದ ಮಾಂತ್ರಿಕ ಮಹಾ ಕವಿಯಲ್ಲದೆ ಇನ್ನೇನು?

'ರಾಮ' ನಮ್ಮೆಲ್ಲರನ್ನೂ ರಂಜಿಸುವ ಅನ್ವರ್ಥ ನಾಮ
ಮಹಾ ಕವಿಗಳೆಲ್ಲ ಅನ್ವರ್ಥ ನಾಮಗಳಿಗೆ ಅನುರೂಪವಾಗಿ
ತಮ್ಮ ನಾಯಕರನ್ನೂ, ಎಲ್ಲಾ ಪಾತ್ರಗಳನ್ನೂ ತಮ್ಮ ಕಥೆಯನ್ನು ಹೆಣೆದರು
ರಾಮನಿಗೆ "ದಾಶರಥಿ", ಆದಿಯಾಗಿ ಅನೇಕ ಅನ್ವರ್ಥ ನಾಮಗಳನ್ನು
ತಮ್ಮ ಕಥೆಯಲ್ಲಿ ಸಂದರ್ಭಕ್ಕೆ ಸೂಕ್ತವಾಗಿ ಅನೇಕ ಕಡೆ ಉಪಯೋಗಿಸಿದ್ದಾರೆ.

ನಮಗೆ ನಾವೇ ಅನ್ವರ್ಥ ನಾಮಗಳನ್ನು ಕೊಟ್ಟು ಕೊಳ್ಳಬಹುದೇ?
ನಿಮಗೆ ನೀವೇ ಕೆಲವು ನಾಮಗಳನ್ನು ಹಾಕಿಕೊಳ್ಳಿ. ಇತರರಿಗೆ ಪಂಗನಾಮಗಳನ್ನು ಹಾಕಿದ್ದೀರೋ?
ಹಾಗಾದರೆ, ನಿಮ್ಮ ಹೆಸರು "ಪಂಗನಾಮ ಕುಶಲ" ಅಥವಾ ಪಂಗನಾಮ ಕಲಾಕಾರ".

ನೀವೇ ಯೋಚಿಸಿ ನೋಡಿ: ನಿಮಗೆ ಅಷ್ಟೋತ್ತರ (ಅಂದರೆ ನೂರೆಂಟು) ಬೇಕೋ? ಸಹಸ್ರ ನಾಮಗಳು ಬೇಕೋ?

ದಾನಿ ದೀನರ ಋಣಾನುಬಂಧ

ದಾನಿ ದೀನರ ಋಣಾನುಬಂಧ
ಕೆ. ಆರ್. ಎಸ್. ಮೂರ್ತಿ

ಸಾಲ ಸೋಲ ಕೊಟ್ಟೊಡನೆ ಅಂಟುವುದು ತಲೆ ಶೂಲೆ;
ಕೊಟ್ಟದ್ದು ಕೈ ಬಿಟ್ಟು ಹೋಯಿತಲ್ಲಾ ಎಂದು ವ್ಯಥೆ;
ಬಡ್ಡಿಯ ಆಸೆ ಒಂದು ಕಡೆ, ಬಡ್ಡಿಯು ದೊಡ್ಡ ಗುಡ್ದೆಯಾದೀತೆಂದು;
ಅಸಲೇ ಪಲಾಯನವಾದೀತೆಂದು ಭಯದ ಚಳಿಯ ನಡುಕ.

ಸಾಲಕ್ಕೆ ನೀಡಿದ ಕೈಗೆ ತಗುಲುವುದು ಋಣ ಭಾರದ ಕಬ್ಬಿಣದ ಬೇಡಿ;
ಬಡ್ಡಿಗೆ ಬಡ್ಡಿಗಳ ಸಂತಾನ ಬೆಳೆದು ನೊಗವು ಬಿಗಿಯಾಗುತ್ತಾ,
ನೇಣಾಗಿ ಹೋಗಿ ಗಂಟಲಿನಲ್ಲಿ ಉಸಿರೇ ಕಟ್ಟಿ ಹೋಗುವ ಹೆದರಿಕೆ.

ಕೊಟ್ಟರೆ ಮನಸಾರೆ ಕೊಟ್ಟುಬಿಡು ಕೈ ನೀಡಿ ದಾನವನು;
ನಿನ್ನ ಬೆನ್ನು ಹತ್ತುವಳು ಪುಣ್ಯದ ಲಾವಣ್ಯ ಸುಂದರಿ!

ದೀನನಾಗಿ ಬಳಲುತಿರುವಾಗ, ಪಡೆ ದಾನದ ಪುಣ್ಯವನು;
ಈ ತರಹದ ಪುಣ್ಯದ ಋಣವನ್ನು ಅತಿ ಬೇಗ ತೀರಿಸಿಕೊ;
ನಿಜ ಪುಣ್ಯದ ಕಾಲ ಬಂದೊಡನೆ ಕಾತರದಿ ಕೈ ಬಿಚ್ಚಿ ಕೊಟ್ಟುಬಿಡು,
ಬಡ್ಡಿಗೆ ಬಡ್ಡಿ ಕೂಡಿಸಿ ದೀನನೋರ್ವನ ಕಂಡೊಡನೆ.

ದಾನಿ ದೀನನ ಹುಡುಕಿ ಮಾಡುವುದೇ ತೀರ್ಥಯಾತ್ರೆ;
ಕೊಡುವುದೂ, ಬೇಡುವುದೂ ಒಂದು ರೀತಿಯ ಹಸ್ತ ಲಾಘವೇ!
ಬೇಡುವ ಕೈ ಕೊಡುವ ಕೈಯಾಗುವ ಕಂಕಣ ಧಾರಣ;
ಋಣವು ಪುಣ್ಯವಾಗುವ, ಕಬ್ಬಿಣವು ಸುವರ್ಣವಾಗುವ ರಸಾನುವರ್ತನೆ;
ದಾನಿ, ದೀನರದು ವಿಭಿನ್ನ ತರಹದ ಪೂರ್ವ ಜನ್ಮದ ಸಂಬಧ!

ಬದಲೇ ಚೆನ್ನ

ಬದಲೇ ಚೆನ್ನ
ಕೆ. ಆರ್. ಎಸ್. ಮೂರ್ತಿ

ಇದ್ದುದನು ಹಿಂದೆ, ಇರುವುದನು ಇಂದು, ಉಳಿಯದನು ಮುಂದೆ ಕಂಡುಕೊ
ಬದಲದನು ಎಂದೆಂದೂ ಕಣ್ಣಲ್ಲಿ, ಕಣ್ಣಿಕಿ, ಕಾಣುವುದನು ಚೆನ್ನಾಗಿ ನೆನೆದುಕೊ

ಇದ್ದುದನು, ಇರುವುದನು, ಉಳಿಯದನು ಒಂದೂ ಬಿಡದಂತೆ ತಿಳಿಯಬಹುದೇ?
ಆಗುವುದೇ ಇಲ್ಲ; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಅಲೆದು ಸರಿಯಾಗಿ ಅರಿಯಬಲ್ಲುದೇ?

ಬದಲಿದನು, ಬದಲಿಪುದೆಲ್ಲನು ತಿಳಿಯುವುದು ಬದಲಿಪ ನಿನಗಂತೂ ಆಗಬಲ್ಲುದೇ?
ಬದಲದು ಆವುದೋ ಅದಕೂ ಬದಲಿಪುದನು ಕಂಡುಕೊಳ್ಳುವ ಪರಿಯಾಗುವುದೇ?

ಬದಲದು ಎಲ್ಲಕೂ ಅಂಟದೇ ಇರುವುದಲ್ಲವೇ? ಅಂಟದೆಯೇ ಕಾಣುವುದೆಂತು!
ಬದಲದು ಬದಲಿಪದಾದರೆ ಕಂಡೀತೋ ಮಾಡಿಕೊಂಡು ಬದಲಿಪದೆಲ್ಲದರ ನಂಟು!

ಎಲ್ಲೆಲ್ಲೂ ಬದಲೇ ಹಿಂದೆ, ಇಂದು, ಮುಂದೂ; ಎಲ್ಲೆಲ್ಲೂ ಬದಲದು ಎಂದಾದರಿತ್ತೇ?
ಬದಲದು ಬದಲೇ ಇಲ್ಲದೆ ಬಲು ಬರಡಾಗಿದ್ದು ಬೇಸತ್ತು, ಬದಲಿಪ ಪರಿಗೆ ತಿರುಗಿತೇ?

ಬದಲಿಪುದಾಟ; ಬದಲಿ, ಬದಲಿ ಹೊಸತಾಗುವುದು ಚೆಲ್ಲಾಟ; ಚೆಂದದ ಮುಗಿಯದಾಟ
ಅಂತಿದ್ದು, ಇಂತಾಗಿ, ಎಂತೆಂತೋ ಆಟಗಳನಾಡುವ ಚಟದ ಅನಂತ ಪರಿಪರಿಯಾಟ

ಗುರುವಾರ, ಆಗಸ್ಟ್ 26, 2010

ಪಾಪದ ಜನ ನೀವು; ಪಾಪಕರ್ಮದ ಫಲ

ಪಾಪದ ಜನ ನೀವು; ಪಾಪಕರ್ಮದ ಫಲ
ಕೆ. ಆರ್. ಎಸ್. ಮೂರ್ತಿ

ಸುಳ್ಳರೋ? ಕಳ್ಳರೋ? ಮಳ್ಳರೋ? ಜೊಳ್ಳರೋ; ಗೆದ್ದವರೋ? ಪೆದ್ದರೋ? ಕದ್ದವರೋ? ಮಂದ ಬುದ್ದಿಯವರೋ?
ಮೊಸಗಾರರೋ? ಹೇಸಿಗೆಯ ಮನದವರೋ? ಹಾಸಿಗೆಯ ವೀರರೋ? ಇತರರ ಕಾಸಿಗೆ ಕೈ ಚಾಚುವರೋ?

ಲಿಂಗ ವಿಕಲರೋ? ಮಂಗನ ಮನದವರೋ? ಅಂಗನೆಯರ ಆಸೆ ಬುರುಕರೋ? ಮೋಸದ ಬಲೆ ಎಸೆಯುವರೋ?
ಸಾಸಿವೆಯ ಕಾಳಿನ ಮೆದುಳಿನವರೋ? ಎಲ್ಲರ ತಲೆಗಳನು ಬೋಳಿಸುವರೋ? ಟೋಪಿಯ ಮಾರಾಟಗಾರರೋ?

ನೀವಲ್ಲತಾನೆ? ನಾನಂತೂ ಅಲ್ಲ, ನಿಮಗೆ ಗೊತ್ತೇ ಯಾರಾದರೂ? ಹಾಗೋ? ನನಗೂ ಗೊತ್ತಪ್ಪ ನೂರಾರು ಜನ.
ನೂರು ಜನರಲಿ ಅವರೇ ಹೆಚ್ಚು; ನರಿ, ಕುನ್ನಿ, ಹುಚ್ಚು ನಾಯಿಯ ಗೋತ್ರದವರು; ಅವರದಂತೂ ಬಲು ಗಿಲೀಟು ತನ

ನಿಮಗೆ ಗೊತ್ತಿಲ್ಲವೇನೋ, ನಿಮ್ಮ ಮುಖದ ಮೇಲೆ, ನೀವು ಪಾಪದ ಜನರೆಂದು ಬರೆದು ಕೊಂಡಿರಬಹುದು ಅಲ್ಲವೇ?
ಅವರಿಗೆ ಕಾಣಿಸಿಬಿಡುವುದು, ನೀವು ಆರು ಮೈಲು ದೂರದಲ್ಲಿ ಬರುವಾಗಲೇ; ಅವರೆಲ್ಲ ದೂರ ದೃಷ್ಟಿಯ ಓದುಗರಲ್ಲವೇ!

ಹಾವಿನ ನಾಲಿಗೆಯಲ್ಲಿ ಹೊರಡುವುದು ದೊಡ್ಡತನದ ಅಡ್ಡ ಹೆಸರುಗಳೇ, ಮೈ ಮೇಲೆಲ್ಲಾ ಬಿರುದು ಬಾವಲಿಗಳುಗಳ ಆಭರಣ
ನಿಮಗೆ ಮಾತ್ರ ಹುಟ್ಟು ಕುರುಡು; ಪರಮ ಸಾಧುಗಳಾರು, ಕೊರಮ ಖೈದಿಗಳಾರು ಒಬ್ಬರಿಂದೊಬ್ಬರನು ಹೇಳಿ ನೋಡೋಣ

ನೋಡಿದರೆ ಮಾತ್ರ ನಮ್ಮ, ನಿಮ್ಮ ಹಾಗೆಯೇ ಕಾಣುವರು; ಬಾಯಿ ಬಿಟ್ಟು ಹಾಡಿದರೆ ಆಗ ಚೆನ್ನಾಗಿ ಕೇಳುವುದು ಕರ್ಕಶ ನಾದ
ಬಲೆಗೆ ಬಿದ್ದವರ ಮುಖಕ್ಕೆ ಮಂಕು ವಿಭೂತಿ ಲೇಪನ; ಜೊತೆಗೆ ಏಳೆಯುವರು ದೊಡ್ಡ ಪಂಗನಾಮ; ನಿಮಗೆ ಆಗ ಅದೇ ಆನಂದ

ಕೈ ಬಿಚ್ಚಿ ಸ್ವಲ್ಪ; ನಿಮ್ಮ ಅಂಗೈ ಬರಹವನು ಬಿಡಿಸಿ ನೋಡುವೆನು. ನಿಮಗೆ ಈ ಜನ್ಮದಲ್ಲೇ ಸ್ವಲ್ಪವಾದರೂ ಬರಬಹುದೇ ಬುಧ್ಧಿ?
ಶನಿ, ರಾಹು, ಕೇತುಗಳು ಹಾಕಿರುವರು ಠಿಕಾಣಿ, ಟೆಂಟು, ಇನ್ನೂ ಎಂಟು ಜನಮಕೂ. ಬೇಗ ಗಂಗೆಯಲಿ ನಿಮ್ಮ ಮೈಯನ್ನು ಅದ್ದಿ!