ಸೂತ್ರಧಾರನ ಕಿರು ಘೋಷಣೆ:
(ಈ ಕೆಳಗಿನ ಸೂತ್ರಧಾರನ ಮಾತುಗಳು ಘೋಷಣೆಯ ಪರಿಯಲ್ಲಿ, ಜೋರು ಕಂಠದಲ್ಲಿ ಇರಬೇಕು. ಎಲ್ಲ ದಿಕ್ಕಿಗೂ ತಿರುಗುತ್ತಾ ಎಲ್ಲರನ್ನೂ ದೃಷ್ಟಿಸಿ ನೋಡುವಂತೆ, ನೇರವಾಗಿ ನೆರೆದವರಿಗೆ ಹೇಳುವಂತೆ, ಸ್ವಲ್ಪ ಅತ್ತಿತ್ತ ನಡೆದು, ಸುತ್ತಿ ಘೋಷಿಸ ಬೇಕು)
(ಈ ಘೋಷಣೆ ಮಾಡುತ್ತಿರುವಾಗ, ಮಧ್ಯೆ, ಮಧ್ಯೆ ಒಬ್ಬರು ವಿಧವಿಧವಾಗಿ ತಮಟೆಯೊಂದನ್ನು ಹೊಡೆಯಬೇಕು, ಜೊತೆಗೆ ಹಾಂ, ಹೂಂ. ಇತ್ಯಾದಿ ಹೂಂ ಗೊಡುತ್ತಿದ್ದರೆ ಬಹಳ ಚೆನ್ನ)
ಕೇಳ್ರಪ್ಪಾ ಕೇಳಿ (ತಮಟೆ), ಕಿವಿ ನೆಟ್ಟಗೆ ಮಾಡಿಕೊಂಡು, ಸರಿಯಾಗಿ ಕೇಳಿ. (ತಮಟೆ), ನಿಮಗೋಸ್ಕರಾನೆ ನಾವೆಲ್ಲಾ ಒಂದು ನಾಟಕ ಮಾಡ್ತಿದೀವಿ. (ತಮಟೆ) ನಮ್ಮ ನಾಟಕ, ಬರೀ ನಾಟಕವಲ್ಲ. (ತಮಟೆ), ನಿಮ್ಮ ಹಳಿಯ ಕಥೆಯೇ ಇದು; (ತಮಟೆ), ನಮ್ಮ ಊರಿನ ಕಥೆಯೂ ಹೌದು; ನಮ್ಮ ರಾಜ್ಯದ ಕಥೆ, ನಮ್ಮ ದೇಶದ ಕಥೆಯೂ ಕೂಡ ಇದೇ!(ತಮಟೆ),
ಎಲ್ಲಿ ನೋಡೋಣ! ಒಂದು ಸಾರಿ ಜೋರಾಗಿ ಕೂಗಿ, ಬಹಳ ಜೋರಾಗಿ ಕೈ ತಟ್ಟಿ ಚಪ್ಪಾಳೆ ತಟ್ಟಿ.(ಈಗ ಕೊನೆಯದಾಗಿ ತಮಟೆ),
(ಇದರ ನಂತರ, ಸೂತ್ರಧಾರನು ಹಿಂದೆ, ಹೆಂದೆ ಹೆಜ್ಜೆ ಇಟ್ಟು ಕೊಂಡು ಅಥವಾ ಒಂದು ಸಾರಿ ಬೇಗ ಸುತ್ತಿ ನೆರೆದವರೊಡನೆ ಬೆರೆತು ಬಿಡಬೇಕು)
(ನಂತರ, ಸ್ವಲ್ಪವೂ ತಡವಿಲ್ಲದೆ ನಾಟಕ ಪ್ರಾರಂಭ.)
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ