ಬರುತಿದೆ ನೋಡಿ ನಮ್ಮ ಬೀದಿ ನಾಟಕದ ದಂಡು
ಕೆ. ಆರ್. ಎಸ್. ಮೂರ್ತಿ
ನೀವು ನಿಂತಲ್ಲೇ ನಿಲ್ಲಿ, ಕುಂತಲ್ಲೇ ಕೂರಿ, ನಾವು ಈಗಲೇ ಆಡುವೆವು ನಿಮ್ಮ ಮುಂದೆ ನಾಟಕ
ನೀವು ಇದ್ದಲ್ಲೇ ನಮಗದು ರಾಜ ಬೀದಿ, ಬೇಗಲೇ ಹೂಡುವೆವು ಹಾಡಿ ಕುಣಿದು ಬೀದಿ ನಾಟಕ
ನಮ್ಮ ಊರಿನ, ನಿಮ್ಮ ಹಳ್ಳಿಯ, ಅವರ, ಇವರ ಮನೆಯ ಕಥೆಯೆಲ್ಲಾ ಸಾಕು ನಮ್ಮ ಕುಣಿತಕ್ಕೆ
ಬಿಡಿಗಾಸಿದ್ದಾರೆ ಸಾಕು ನಾವಿರುವುದೇ ಆಗಾಗ ನಿಮ್ಮ ಮನವನೆಲ್ಲಾ ಥೈ ತಕ ಥೈ ಕುಣಿಸೋದಕ್ಕೆ
ಹಾದಿ ಬಿಡಿ, ಹಾದಿ ಬಿಡಿ ನಿಮ್ಮ ವಠಾರದ ಹಾದಿ ಬಿಡಿ, ನಮ್ಮ ಬೀದಿ ಹೈಕಳೆಲ್ಲಾ ಬಂದರು ನೋಡಿ
ನಿಮಗೆಲ್ಲಾ ನಗು ಬಂದರೆ ಚೆನ್ನಾಗಿ ನಕ್ಕು ಬಿಡಿ, ತಟ್ಟಿ ಚಪ್ಪಾಳೆ ಕೈಸೇರಿಸಿ ಗಟ್ಟಿಯಾಗಿ ತಟ್ಟಿ ಬಿಡಿ
ಕೆಂಚಣ್ಣ, ಲಿಂಗಣ್ಣ, ಮುನಿಯಪ್ಪ, ಮಾದಪ್ಪ, ನೀವೆಲ್ಲಾ ಸೇರಿ ಹೊಡೀರೋ ಜೋರು ಜೋರಾಗಿ ಶೀಟಿ
ಗುಂಡಮ್ಮ, ನಾಗಮ್ಮ, ಸೀತಮ್ಮ, ನಂಜಮ್ಮ, ನಿಮ್ಮ ಕಿಲ, ಕಿಲ ನಗುವಿಂದಲೇ ನಮ್ಮೆಲ್ಲರ ಬೆನ್ನು ತಟ್ಟಿ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ