ಸೋಮವಾರ, ಅಕ್ಟೋಬರ್ 18, 2010

ಭಾವಿ ಕವಿ ಮಾತ್ರ ನಾನು

ಭಾವಿ ಕವಿ ಮಾತ್ರ ನಾನು
ಕೆ. ಆರ್. ಎಸ್. ಮೂರ್ತಿ

ಮಹಾನ್ ಕವಿಗಳೆಲ್ಲರು ನೀವು
ಬಿರುದು, ಬಾವುಲಿ,
ಹಾರ, ತುರಾಯಿ,
ಪದಕ, ಫಲಕ,
ಇತ್ಯಾದಿ, ಇತ್ಯಾದಿ.

ನಾನಂತಹ ಕವಿಯಲ್ಲ.
ನಾನೆಂತಹ ಕವಿ ನಿಮ್ಮ ಮುಂದೆ!

ನಾನೆಂತಹ ಕವಿ ಕೇಳಿ:
ಕೇಳಿಯಾಡುವ, ಗೇಲಿ ಮಾಡುವ,
ಖಾಲಿ ಮಾತಿನ, ಗಾಳಿ ಮಾತಿನ,
ಪೋರನಂತೂ ನಾನಲ್ಲವೇ ಅಲ್ಲ.

ಆನೆ ಕಿವಿ ಮಾಡೀಗ ಕೇಳಿರಿ:
ನಾನೊಬ್ಬ ಭಾವಿ ಕವಿ
ಸ್ವಾಭಾವಿ ಕವಿ, ಸಂಭಾವಿ
ಅನುಭಾವಿ ಕವಿ, ಸಹಾನುಭಾವಿ ಕವಿ

ಮನಸು ಕೆರಳಿಸುವ ಕವಿ
ಕಣ್ಣು ಅರಳಿಸುವ ಕವಿ
ತನುವ ಹೊರಳಿಸುವ ಕವಿ
ಕರುಳ ಕರೆಯುವ ಕವಿ
ದುರುಳರ ದೂರುವ ಕವಿ
ಮರುಳರ ಹೀಯಾಳಿಸುವ ಕವಿ

ಗುಂಡಿಗೆಯ ಕುಣಿಸುವ ಕವಿ
ಕುಣಿಯುವ ಕುಂಡಿಯ ವರ್ಣಿಸುವ ಕವಿ
ಗುಂಡಿಗೆಯ ಬಡಿತಕ್ಕೆ ಅಲ್ಲಾಡುವ
ಗುಂಡು ಚೆಂಡುಗಳ ಚೆಂದಾಗಿ ಚಿತ್ರಿಸುವ
ನಿಮ್ಮ ಧಮನಿಯಲಿ ಜೇನು ಹರಿಸುವ
ಸುಖಾನುಭಾವಿ ಕವಿ ಮಾತ್ರ ನಾನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ