ಶುಕ್ರವಾರ, ಜುಲೈ 9, 2010

ತುಂಟು ಮನ ನನ್ನದು

ತುಂಟು ಮನ ನನ್ನದು
ಕೆ. ಆರ್. ಎಸ್. ಮೂರ್ತಿ

ಕಾಣುವ ಕಲೆಯಲ್ಲಿ ಗೆಲಿಲಿಯೋನ ತಲೆಮಾರಿನವ ನಾನು;
ಜಾಣನವ ತಲೆಯಲ್ಲಿ ಮನೆ ಮಾಡಿ ಅಲೆಗಳ ಎಬ್ಬಿಸುವನು.

ದೂರ ದರ್ಶನವು ನಮ್ಮದೆಂದು ಮರೆಯದಿರಿ, ಅನ್ಯಥಾ ದೂರದಿರಿ,
ನಿಮಗೆ ಕಾಣದ್ದು ನಾವು ಮುಂಚೆಯೇ ಕಂಡರೆ ಸುಮ್ಮನೆ ಬೈಯ್ಯದಿರಿ.

ಚರ್ಚೆಗೆ ಬಾಹಿರ ಚರ್ಚು, ನಿಮ್ಮ ನಂಬದಿರೆ ಏಟು ಬೈಗುಳದ ಚಾಟಿ
ದೇಗುಲದ ಮೂರ್ತಿಯನು ಕಲ್ಲೆಂದುದಕೆನಗೆ ಹೇಳ ಬೇಡಪ್ಪ ಚಾಡಿ

ಹೊಲೆಯ ಸುಂದರ ಅಬಲೆಯ ಹೆಗಲ ಮೇಲೆ ಒಲವಿನ ತೋಳು ನನ್ನದು
ಕೊಪವೇತಕೆ ಅವಳೂ ನಾನೂ ಜಂಟಿಯಲಿ ಎಂಟೇ ಗೇಣು ಸ್ವರ್ಗವಾಗುವುದು

ಸೋಕ್ರಟೀಸನ ಕಟು ಒರಟು ಬಾಯಿ ನನ್ನದಾಗಿರುವಾಗಂತೆಯೇ ಹೇಳುವೆನು
ವಕ್ರವಾದರೂ ದಿಟವು ದಿಟವೇ, ಕಣ್ಣಿಗೆ ಕಂಡಂತೆಯೇ ಚಿತ್ರವನ್ನು ಬಿಡಿಸುವೆನು

ಆಡುವ ಮಾತಿಗೆ ಅತಿಖಾರದ ಮಸಾಲೆ ಒಡಗೂಡಿಸಿದರೆ ಒಮ್ಮೊಮ್ಮೆ,
ಬಂಡನ್ನು ತುಂಬಿಸುವ ಭಂಡತನದ ಓತಿಕ್ಯಾತನೂ ನಾನೇ ಮತ್ತೊಮ್ಮೆ

ಮೆಣಸಿನ ಖಾರವೂ ಬಲು ರುಚಿ; ಹುಳಿಯೂ, ಕಹಿಯೂ ಇರಬೇಕಲ್ಲವೇ!
ನಾಲಗೆಗೆ ನಾಕದ ಕುಣಿತಕ್ಕೆ ಸಕಲ ಸಾಂಬಾರಗಳು ಇರಲೇ ಬೇಕಲ್ಲವೇ!

ಕಾಳಿದಾಸನೂ, ಪೋಲಿ ವಾತ್ಸಾಯನನೂ, ಜಯದೇವನೂ ಬರುವರಯ್ಯ
ವೇದ ವ್ಯಾಸನೂ, ಪೋಲಿ ಕಿಟ್ಟಿಯೂ, ಶೇಕ್ಸಪಿಯರನೂ ಕುಣಿಯುವರಯ್ಯ

ನನ್ನ ತಲೆಯಲಿ ಮನೆ ಮಾಡಿ, ಭಾವ ಭಜನೆಯ ಹಾಡಿಯೆಲ್ಲಾ ಕುಪ್ಪಳಿಸುವರು
ಜೊತೆಗೆ ಮೇನಕೆಯ ಬೆತ್ತಲೆ ಆಟ, ವಿಶ್ವಾಮಿತ್ರರು ಹಿಂದೆಯೇ ಓಡಿ ಬರುವರು

ರಂಗು ರಂಗಿನಾ ಪ್ರಸಂಗ ಬೆಳಗೂ, ರಾತ್ರಿಯೂ, ಎಡೆಬಿಡದೆ ಮನದ ರಂಗದಲಿ
ಮೊದ್ದು ನಿಶ್ಶಬ್ಧದ ಬಿಕೋ ಖಾಲಿಯ ತಲೆಯವರು ನೀವೆಲ್ಲ ಇರಬೇಕು ಪೆಚ್ಚಿನಲಿ!

ಪೆಚ್ಚು ತಲೆಗಿಂತ, ಹುಚ್ಚು ತಲೆಯೇ ಮೇಲು, ಹೆಚ್ಚು ಪುಣ್ಯದ ಗಂಟು ನನದುಂಟು
ಕಿಚ್ಚು ಹಚ್ಚಿ ಜ್ವಾಲೆಯು ಬೆಳಗುತಿರೆ ಬಿಸಿಮನದ ಘಾಸಿಯ ಮನವು ಬಲು ತುಂಟು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ