ಗುರುವಾರ, ಜುಲೈ 8, 2010

ನಾವೆಲ್ಲಾ ಒಂದೇ ನಾವೆಯ ನಾವಿಕರೆ?

ನಾವೆಲ್ಲಾ ಒಂದೇ ನಾವೆಯ ನಾವಿಕರೆ?
ಕೆ. ಆರ್. ಎಸ್. ಮೂರ್ತಿ

ನಾನೂ ಹೌದು, ನೀವೂ ಹೌದು, ನಮ್ನಿಮ್ಮ ನಾವೆ ಬೇರೆ
ನಾವೆಲ್ಲಾ ಹುಟ್ಟು ಹಾಕುವ ಹರಿಗೋಲುಗಳು ಬೇರೆ ಬೇರೆ

ಅತಿ ಚಿಕ್ಕ ನನ್ನ ದೋಣಿಯಲಿ ಈಗಾಗಲೇ ನೂರಾರು ತೂತು
ಅವರದು, ನಿಮ್ಮದು ಹೆಮ್ಮೆಯ ಹಡಗು ಬಲು ದೊಡ್ಡದಾದೀತು

ಉಪ್ಪು ನೀರು ಕುಡಿದೊಳಗೆ ಈಜುತಿಹೆ, ತೂತು ಅಗಲವಾಗುತಿದೆ
ಮೈ ಒದ್ದೆ, ಮಡಿ ಒದ್ದೆ, ಮತ್ತೆ, ಮತ್ತೆ ಒದ್ದೆ, ಎರಡೂ ಕಾಲು ಒದ್ದೆ

ಅತ್ತ, ಇತ್ತ, ಎತ್ತೆತ್ತಲೂ ನೀರೇನೋ ಎತ್ತರಕೆ ಅಲೆಯಾಡುತಿದೆ
ಎಚ್ಚರವಿರಲಿ, ಕುಡಿಯಬಾರದದನು ಮರುಳೇ ವಿಷದ ಉಪ್ಪಿದೆ

ಗಂಟಿನಲ್ಲಿ ಮಣಗಟ್ಟಲೆ ಹಣ್ಣು, ತರಕಾರಿ ಕಟ್ಟು ತಂದಿಹೆ ತಾನೇ?
ಮುಗಿದರೆ, ಹಸಿವಿಗೆ ಸಾಗರದ ತರಕಾರಿಯಾದರೂ ಸರಿ ತಾನೇ!

ಅಕ್ಕನದು ಬಲು ದೊಡ್ಡ ಹಡಗು, ರನ್ನದ ಕೋಣೆಗಳು ಅವರಿಗೆಲ್ಲ
ಸುವರ್ಣ ಸಿಂಹಾಸನದ ಪೀಠಗಳು ಹಲವು; ನನಗೆ, ನಿನಗೆ ಅಲ್ಲ

ಅವರಿಗೆ, ಮತ್ತವರವರಿಗೆ ಮಾತ್ರ ಆ ಆಸನ ಮೀಸಲು ಮರುಳೆ
ಪರಾಕಿನ ಮೇಲೆ, ಪರಾಕು ಪೇರಿಸಿ ಒದರುತಿರು ಹಗಲು ಇರುಳು

ನನಗೆ, ನಿನಗೆ, ಹೊರಗಿನವರಿಗೆ ಸಿಗುವುದು ಅತ್ಯಲ್ಪ, ಸ್ವಲ್ಪವಷ್ಟೇ
ಚಪ್ಪಾಳೆ ತಟ್ಟಿ, ತಟ್ಟಿ ನಿನ್ನ ಕೈ, ತೋಳುಗಳು ಆದೀತು ಬಲು ಗಟ್ಟಿ

ಪಂಕ್ತಿ ಭೇದ ತಂಗಿಗೂ ಬಂದ ಚಾಳಿ, ಅಕ್ಕನ ಚಾಳಿ ಮನೆ ಮಂದಿಗೆಲ್ಲ
ಅಕ್ಕನೂ ಬೇಡ, ತಂಗಿ, ಇನ್ನು ಮುಂದೆ ತಮ್ಮಂದಿರೂ ಹುಟ್ಟಿದಾಗೆಲ್ಲ

ಜಗಳವನು ಕಾಯುವುದು ನಮ್ಮ ಕುಲವನೇ ಕಾಡಿಸಿದೆ ಬಲು ಹಿಂದೂ
ಆಸನದ ಆಸೆಯ ಕುಲದ ದುರ್ವಾಸನೆ ನಾರುವುದು ಇಂದೂ ಎಂದೆಂದೂ

ಅವಿಭಕ್ತ ಕುಟುಂಬವು ನಿನ್ನ ತಾತನ ಕಾಲದ ಗೊಡ್ಡು ಸಂಪ್ರದಾಯವೋ!
ಒಂದೇ ಕರುಳು ನೂರಾರು ಚಿಂದಿಯಾಗುವುದು ನಮ್ಮ ಹಣೆ ಬರಹವೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ