ಶುಕ್ರವಾರ, ಜುಲೈ 30, 2010

ಜೀನು ಪುರಾಣ

ಜೀನು ಪುರಾಣ
ಕೆ. ಆರ್. ಎಸ್. ಮೂರ್ತಿ

ಜೀನು ಜೀನಿನ ಜಂಟಿಯಾಟ; ಜನಕ ಜನನಿ ಜೊನ್ನ ಜೇನು ಉಂಬುವ ಮಿಲನ
ಜಂಟಿ ಸಂಕೇತದ ನವ ಜೀನಿನ ಜನನ; ಜನ್ಯ ಜೀನಿನ ಪುನರಪಿ ಗುಣೀಕರಣ

ಸರಪಣಿಯ ಸಂಕೇತ ಒಂದು ಎರಡಾಗಿ, ಅವು ನಾಲ್ಕಾಗಿ, ಹಾಗೇ ಕೋಟಿ, ಕೋಟಿ
ಆಗುವ ಅಂಗ ಅಂಗಗಳು ಮಾತ್ರ ಬೇರೆ, ಬೇರೆ; ಜೀವ ವೈಚಿತ್ರ ಒಂದಕ್ಕೊಂದು ಸಾಟಿ

ಸಾವಿರಾರು ವರುಷಗಳಲಿ ಜೀನು ಫಕ್ಕನೆ ವಿಭಿನ್ನ: ವಿಚಿತ್ರವಿನ್ನೊಂದರ ಜನ್ಮವೀ ಜಂತು
ಈ ಜೀನು ಪರಿ ಪರಿ ಜೀವ ಜಂತುಗಳ ಕೂಟಕ್ಕೆ ಹೊಸದೊಂದು ಕೊಡುಗೆಯಾಗಿ ಬಂತು

ನೀರಿಂದ ನೆಲಕ್ಕೆ, ನೆಲದಿಂದ ನಭಕ್ಕೆ, ಮರದಿಂದ ಮರಕ್ಕೆ, ನೆಲೆಯಿಂದ ನೆಲೆಗೆ ವಲಸೆ
ವಸುಧೆ ಅಮ್ಮನ ಸಂಸಾರದ ಜಾತ್ರೆ ದಿಕ್ಕು ದಿಕ್ಕಿಗೆ, ತೆವಳಿ, ನಡೆದು, ಈಜಿ, ಹಾರುವ ಆಸೆ

ತೀರದ ಆಸೆ; ತೀರದಿಂದ ತೀರಕ್ಕೆ ಈಜಿ, ನೆಗೆದು, ತೇಲಿ, ಸಂಸಾರವೆಲ್ಲ ಮಹಾ ಯಾತ್ರೆ
ವೃಕ್ಷ, ಸಸ್ಯ, ಗಿಡ, ತೃಣ, ಪೊದೆಗಳದಂತೂ ಹಸಿರಿನ ದೀಕ್ಷೆ; ಇವಕೆ ಬೇಡವಿಂತಹಾ ಯಾತ್ರೆ

ಹುಟ್ಟಿದಲ್ಲೇ ನೆಲೆಸಿ, ವರುಣ ಸ್ನಾನವ ಮಾಡುತ, ವಸುಧೆಯ ಮೊಲೆಯ ಹೀರುತ ಬೆಳೆವುದು
ಸೂರ್ಯನ ಆವಾಹನೆ, ಗಾಳಿಯ ಉಸಿರಾಟ, ಬೀಸುವ ಮರುತನಿಗೆ ತಲೆ, ಮೈ ಓಲಾಡಿಸುವುದು

ಬೆಳೆಯ ಜೊತೆ, ಹೂವು, ಹಣ್ಣು, ಬೀಜ; ಪುಟ್ಟ ರೆಕ್ಕೆಯ ರಂಗು ರಂಗಿನ ಚಿಟ್ಟೆ, ಚೆಂದದ ದುಂಬಿ,
ಹಕ್ಕಿ ವೃಂದಕೆ ನಿತ್ಯ ಮಧು ಸಂತರ್ಪಣೆ: ಹೂವು, ಹಣ್ಣು, ಬೀಜ ಹಲವು ಹಲವು ಧರೆ ತುಂಬಿ

ಉಂಡ ಅತಿಥಿಗಳ ಮೈಮೇಲೆ ಗುಟ್ಟಾಗಿ ಗಂಟೊಂದು ಸಿಕ್ಕಿಸಿ ಬೀಜ ಪ್ರಸಾರ ಸಂಸಾರವನು ಬೆಳೆಸುವ ಪರಿ
ಮೈಗೆ ಅಂಟಿದ ಜೀನನು ಮತ್ತೆಲ್ಲಿಗೋ ಹಾರಿ, ಕೊಡವಿ ಮತ್ತೆ ನೆಲ ಊರಿ ಮೊಳಕೆ ಮಾಡಲು ಸಹಕಾರಿ


ಜೀನು ನನ್ನದು ಜಾಣತನದಲಿ ಎಲ್ಲಾದರಲ್ಲಿ, ಯಾರ ಜೀನಿನ ಜೊತೆ ಜಂಟಿ ಮಾಡಿಸಲಿ ಎನ್ನುವುದು ಪ್ರತಿ ಜೀನು
ತನ್ನ ಜೀನಿನ ಪ್ರವರ ಅಮರವಾಗಲಿ, ಎನ್ನುವುದೇ ಪ್ರತಿ ಜೀನಿನ ಎಡೆಬಿಡದ ಹಟ ಯೋಗ ಇದು ಸರಿಯಲ್ಲವೇನು?

ಮೈ ಅಂಟಿದ ಜೀನೇ ಜೇನು

ಮೈ ಅಂಟಿದ ಜೀನೇ ಜೇನು
ಕೆ. ಆರ್. ಎಸ್. ಮೂರ್ತಿ

ಜೀನು ನಿಮ್ಮದು ಜಾಣ ಜೀನೆಂದು ನಿಮ್ಮ ಜೀನಿನ ಪ್ರವರ ಒದರಿ ಒದರಿ ಹಿಗ್ಗಿ
ಏನು ಪಾಪ ಕರ್ಮದ ಫಲವೋ ಕೆಟ್ಟ, ಸೊಟ್ಟ ಜೀನನ್ನು ಪಡೆದಿರೆಂದು ಕೊರಗಿ

ಹುಟ್ಟಿದಾಗ ಸರಿಯಾದ ಜೀನು ಹಣೆಯ ಮೇಲೆ ವಿಧಿರಾಯ ಬರೆಯಲಿಲ್ಲವಲ್ಲ
ಸಾಯುವ ತನಕ ಬಿಡದೆ ಮೈ ಅಂಟಿ ಕೊಂಡು ಕೊಳಪೆ ಜೀನು ಕಾಡುವುದಲ್ಲ

ಎಂದೆಲ್ಲಾ ಜೀನನ್ನು ಕೊಂಡಾಡುವುದೂ ಬೇಡ, ಮಂಡೆ ಬಿಸಿಮಾಡುವುದೂ ಬೇಡಲೋ
ದಕ್ಕಿದ ಜೀನನ್ನೇ ಉಧ್ಧರಿಸಿಕೋ, ಸಿಕ್ಕ ಜೀನಿನಲ್ಲೇ ಜೇನುತುಪ್ಪದ ಸವಿ ಕಾಣೆಲೋ

ನಿನ್ನ ಜೀನಿನ ಅಭಿಮಾನ ನಿನಗಿಲ್ಲದೆ ಹೋದರೆ, ಇತರರು ಯಾತರ ಸಮಾಧಾನ
ಒದಗಿಸುವರೋ? ನಿನ್ನ ಜೀನನು ನೀನೇ ಮಾಡಿಕೊ ಸಕಲಕ್ಕೂ ಅಸಮಾನ ಸಾಧನ

ಸೋಮವಾರ, ಜುಲೈ 26, 2010

ಯಾರಿಗೆ ಜೀವಿಸುವೆ?

ಯಾರಿಗೆ ಜೀವಿಸುವೆ?
ಕೆ. ಆರ್. ಎಸ್. ಮೂರ್ತಿ

ಇರಬೇಕು, ಇಲ್ಲದಿರಬೇಕು; ಎಲ್ಲದನು ಸಲ್ಲಿಸುತಲೇ ಇರಬೇಕು
ತಿನ್ನ ಬೇಕು, ತನುವ ತಣಿಸಲೂ ಬೇಕು; ಆತನಿಗಿದೆಲ್ಲ ಎನ್ನಬೇಕು

ಹೊಟ್ಟೆ ಹೊರೆಯಲು ರಟ್ಟೆಯಲಿ ಬಟ್ಟಲುಗಟ್ಟಲೆ ಬೆವರು ಸುರಿಸಿ
ರೊಟ್ಟಿ ಚಟ್ನಿ, ಲೋಟದಲಿ ಮೊಸರು, ತಟ್ಟೆಯಲಿ ಉಣಲು ಬಡಿಸಿ

ಆತನಿಗೆ ಮೊದಲು, ಮಿಕ್ಕದ್ದು ಪ್ರಸಾದ ನಿಮ್ಮೆಲ್ಲರಿಗೆ ಇದ್ದಷ್ಟೇ ಸಾಕು
ಕಾಣದ ಆತನಿಗೆ, ಎಲ್ಲವನೂ ಕೊಟ್ಟವನೆಂದು ಮಣಿಯುತಿರಬೇಕು

ಕೊಡಬೇಡ ಕೊಟ್ಟ ಕೊನೆಯ ಉಸಿರನೂ ಹುಟ್ಟು ಋಣ ಪುಟ್ಟಿಸಿದವಗೆ
ನಿನಗಾಗಿಯೇ ನಿನ್ನದೇ ಜೀವಿತವ ಅನುಭವಿಸುವ ಪರಿಯಿರಲಿ ನಿನಗೆ

ಶನಿವಾರ, ಜುಲೈ 24, 2010

ಅಕ್ಷರದ ಹರಳೆಣ್ಣೆ

ಅಕ್ಷರದ ಹರಳೆಣ್ಣೆ
ಕೆ. ಆರ್. ಎಸ್. ಮೂರ್ತಿ

ಹರಳೆಣ್ಣೆ ಬೇಕೇ ಹರಳೆಣ್ಣೆ? ಕೆಲವೇ ಸೆಕೆಂಡು ಹರಳೆಣ್ಣೆ
ಉಣ್ಣ ಬೇಕಿಲ್ಲ, ಕುಡಿಯ ಬೇಕಿಲ್ಲ, ನುಂಗಲಾರದ ಎಣ್ಣೆ

ಕಣ್ಣಿನಲಿ ನೋಡಿದರೆ ಸಾಕು, ಕಿವಿಯಲ್ಲಿ ಕೇಳಿದರೆ ಸಾಕು
ಕನ್ನಡಿಗರಿಗೆ ವಾಕರಿಕೆ ಗ್ಯಾರಂಟಿ ತರಿಸುವ ನನ್ನ ಹರಳೆಣ್ಣೆ

ಹೊಟ್ಟೆಯಲಿ ಸೊಟ್ಟ ಗಂಟಾಗಿ ನೋವು ನುಲಿಯುವುದು
ಅಟ್ಟಿಸಿ ಓಡಿಸುವುದು ಒಡನೆ ಸಂಡಾಸಿನ ಸಿಂಹಾಸನಕೆ

ನಿಮ್ಮ ಮುಖವೆಲ್ಲ ನನ್ನಂತೆ ಹರಳೆಣ್ಣೆ ಕಳೆ ತುಂಬುವುದು ನಿಜ
ತಲೆಗೆ ಹಚ್ಚಿದರೆ ನುಣ್ಣಗಾಗುವುದು, ಬೋಳಾಗುವುದು ಖಚಿತ

ಯಾರಿಗೆ ಬೇಕು?

ಯಾರಿಗೆ ಬೇಕು?
ಕೆ. ಆರ್. ಎಸ್. ಮೂರ್ತಿ

ಗುಟ್ಟಾದ ರಟ್ಟು, ಕೆಟ್ಟ ರೊಟ್ಟಿ
ಕೆಟ್ಟಗೆ ಕಿಟಾರೆನ್ನುವ ಪುಟ್ಟ
ಕುಂಟು ಕಾಲಿನ ನಟರಾಜ
ಗಂಟು ಮೊಗದ ಬಂಟ
ಮುಟ್ಟಿದರೆ ಮುನಿ ನಾರಿ

ಇಲ್ಲದನು, ಸಲ್ಲದುದನು ಒಲ್ಲೆ

ಇಲ್ಲದನು, ಸಲ್ಲದುದನು ಒಲ್ಲೆ
ಕೆ. ಆರ್. ಎಸ್. ಮೂರ್ತಿ

ಹೌದಂದರೆ ಅಲ್ಲ, ಅಲ್ಲವೆಂದರೆ ಅಲ್ಲ, ಅನುಮಾನಿಯಾದರೆ ಅಲ್ಲ.
ಇಹುದಂದರೆ ಇಲ್ಲ, ಇಲ್ಲವೆಂದರೆ ಇಲ್ಲ, ಇರಬಹುದೆಂದರೆ ಇಲ್ಲ

ಬೇಕೆಂದರೆ ಇಲ್ಲ, ಬೇಡವೆಂದರೂ ಇಲ್ಲ, ಬಿಗುಮಾನಿಯಾದರೂ ಇಲ್ಲ
ಬೈದರೆ ಇಲ್ಲ, ಬೇಡಿದರೂ ಇಲ್ಲವಲ್ಲ, ಕೈನೀಡಿ ಕಣ್ಣೀರಿಟ್ಟರೂ ಇಲ್ಲ, ಇಲ್ಲ

ಇಲ್ಲದ, ಎಲ್ಲೂ ಇಲ್ಲದ, ಇರುವೆ ಇಲ್ಲದ, ಗೊಡವೆ ಇಲ್ಲದನು ಯಾರು ಬಲ್ಲ?
ಯಾರೂ ಬಲ್ಲದದನು ಎಲ್ಲಾ ಬಲಿದರೆನ್ನುವುದೇಕೆ? ಇಲ್ಲದನು ನಾನೊಲ್ಲೆ

ಶುಕ್ರವಾರ, ಜುಲೈ 23, 2010

ಕವಿ ಕುಂಚದ ಕಿವಿ ಗುಟ್ಟು

ಕವಿ ಕುಂಚದ ಕಿವಿ ಗುಟ್ಟು
ಕೆ. ಆರ್. ಎಸ್. ಮೂರ್ತಿ

ಗುಟ್ಟು ಗಂಟು ಕಟ್ಟಿ, ಒಗಟಿನ ವಟವಟವನೆಲ್ಲ ನಾನಿಂದು ಬಿಟ್ಟೆ ನಿಮಗೆಂದೇ
ಕೊರಳಿನಿಂದ ತಿಳಿಯಾಗಿ ಹರಿಯುತಿದೆ ಸರಳ ಸಾಲುಗಳಿವು ನನದೊಂದೇ

ಅತ್ತ ಇತ್ತ ಕಂಡಿದೆಲ್ಲಕೂ ತಡಬಿಡದೆ ತವಕದಿ ಮಿಡಿಯುವುದು ನಿಜ ತಾನೇ?
ಮಿಡಿತವ ಹಿಡಿದಿಡುವ ಗೊಡವೆ ಕೊಡವಿ ಬಿಡಿ, ಮಿಡಿವಾಗ ಮಿಡಿಯಲಿ ತಂತಾನೆ

ತಡೆಯ ಬೇಡಿ ತಂತಾನೇ ಮಿಡಿಯುವ ಗುಂಡಿಗೆಯು ಡವ್ ಡವ್ ಕುಣಿಯುತಲಿರಲಿ
ಕುಣಿಯುವುದು ತಣ್ಣಗಾಗಲಿ ತಂತಾನೆ, ತನನ ತಾನದ ತಾಣವೂ ಪೂರ ಆರಲಿ

ಮಿಡಿದ ಹಾಡನು, ಒರಲಿದ ರಾಗವನೂ, ತಟ್ಟಿದ ತಾಳವೆಲ್ಲವನೂ ಕನವರಿಸಿ ನೆನೆಸಿ
ಮೆಲುಕು ಹಾಕಿ, ಮತ್ತೊಮ್ಮೆ, ಮಗುದೊಮ್ಮೆ ಕೇಳುತ ತಣಿಯುತ ಮನವಿರಿಸಿ ಆಲಿಸಿ

ತಣಿತವೆಲ್ಲವೂ ತಣ್ಣಗಾಗಿ ಮಂದ ನಿದ್ದೆಯೂ ಬಂದರೆ, ಅಂಗನೆಯ ಅಪ್ಪಿ ಆಲಂಗಿಸಿ
ಕಾವ್ಯ ಸ್ವರೂಪಿ, ಕವಿ ಕೋಮಲೆ ಏಳುವಳು ಒಡನೆ ಆಗ ಅಂತರಾಳದಿಂದ ಗಮನಿಸಿ

ಅವಳ ಗಾನವನು ಬರೆದಿಟ್ಟುಕೊಳ್ಳಿ ಒಲವಿಂದ, ಸಪ್ತ ಸ್ವರಗಳು ತಂತಾನೆ ಹರಿದಂತೆ
ಅವಳ ನೀಳ ಜಡೆಯೇ ಆಗಲಿ ನಿಮ್ಮ ಕುಂಚ, ನಿಮ್ಮ ಎದೆಯೇ ತಾಳೆಯ ಗರಿಯ ಕಂತೆ

ಪ್ರಾಸದ ತ್ರಾಸವೇಕೆ? ಪದಗಳ ಹುಡುಕಿ, ತಡಕುವುದೇಕೆ? ಮಾತ್ರೆಯನು ಎಣಿಸದಿರಿ
ಅವಳ ನಾಲಿಗೆಯು ಉಲಿಯುವುದು ಸರಳ ಧಾರೆಯಲಿ, ನೀವಾಗ ಕವಿಯು ಆಗುವಿರಿ

ಹರಿ ಹಾರಿ ಹೋದರು

ಹರಿ ಹಾರಿ ಹೋದರು
ಕೆ. ಆರ್ ಎಸ್. ಮೂರ್ತಿ

ಹರಿ ಹರಿಯಲ್ಲಿ ಹಾರಿಹೋದರು ಹರಿ
ಹರಿಹರರಿಗೆ ಹರನ ಹರಣ - "ಹರಿ"

ಹರಿಯಾದರೇನು ಹರಿಹರನಾದರೇನು
ಹರಿಯ ಪರಾರಿಗೆ ಕಾರಣವೇ ಆ ಹರನು

ಊರು ಬಿಟ್ಟು ಪರದೇಶ ಅಲೆದ ಕನ್ನಡಿಗ
ಹೊಂಟ ಕನ್ನಡದ ಬಂಟ ಹೊತ್ತು ಸಂದೇಶ

ಅಮೇರಿಕಾದ ಕನ್ನಡದ ತುತ್ತೂರಿ ಜೋಗಿಯೂ
ಹಿಂದೆಯೂ, ಮುಂದೆಯೂ ನಾಗಮಣಿ ಪುಂಗಿಯು

ನೀ ಹೋದೆ, ನಿನ್ನ ಮಾತುಗಳಿನ್ನೂ ಜೀವಂತವಿದೆ
ತುತ್ತೂರಿ ನಾದವದು ಎಲ್ಲರ ಕಿವಿಯಲ್ಲಿ ಗುನುಗುತಿದೆ

ಶನಿವಾರ, ಜುಲೈ 10, 2010

ನಿಮ್ಮ ಕಾಡುವ ಕಪಿಯಂಥ ಕವಿಯು ನಾನಲ್ಲ

ನಿಮ್ಮ ಕಾಡುವ ಕಪಿಯಂಥ ಕವಿಯು ನಾನಲ್ಲ
ಕೆ. ಆರ್. ಎಸ್. ಮೂರ್ತಿ

ನನ್ನ ಮೇಲೇಕೆ ಕೋಪ? ಬಯ್ಯುವಿರಿ ನನ್ನನ್ನು? ಕೆಟ್ಟವನು ನಾನಲ್ಲ.
ನಿಮ್ಮನು ಎಲ್ಲರೆದುರಿಗೆ ವಿಕಟ ಅಟ್ಟಹಾಸದಲಿ ಅಣುಕಿಸಲೇ ಇಲ್ಲ.

ವಿಕೃತ ರೂಪದ ನಿಮ್ಮ ದೆವ್ವದ ಮುಖವನು ಕಂಡು ನಕ್ಕವನೂ ಅಲ್ಲ
ಮೂಗು ಉದ್ದವಾದಾಗ ನಿಮ್ಮೆಡೆಗೆ ಬೆರಳು ತೋರಿಸಿದವ ಅಲ್ಲವೇ ಅಲ್ಲ

ನೂರು ಮುಖದ ಕವಿಯಂತೆ ಯಾರೋ ಮೈಮೇಲೆ ಒಮ್ಮೊಮ್ಮೆ ಬರುತ್ತಾನೆ
ಕೊರಮನವನು ವಿಚಿತ್ರ ಮುಖವಾಡಗಳ ದೊಡ್ಡ ಗಂಟೇ ಹೊತ್ತು ತರುತ್ತಾನೆ

ನನ್ನ ಮೈಮನವ ಸೂತ್ರ ದಾರದಿ ಕಟ್ಟಿ, ಬಣ್ಣ ಬಣ್ಣದ ಕೀಲುಗೊಂಬೆಯ ಆಟ
ಕವಿ ಭಾಷೆಯಾ ಮಂತ್ರ ಬೊಗಳಿ ಊರ ಮಂದಿಯ ಕೆಣಕಿ ಕುಣಿಸುವ ಚೆಲ್ಲಾಟ

ಮನಸಿಗೆ ಬಂದದ್ದೇ ರಾಗ, ಕಾಡು ನಾಯಿಗೂ ಅತಿ ದೊಡ್ಡ ಬಾಯಿಯವನಿಗೆ
ಎಲುಬು ಬುರುಡೆಗಳ ತಟ್ಟಿ ಹಾಕುವನು ರಣ ಮದ್ದಳೆಗಿಂತ ಕರ್ಕಶವು ಕಿವಿಗೆ

ಸಾಕಪ್ಪಾ ಸಾಕು ಮಹರಾಯ ಈ ಶೂರ್ಪನಖನ ತಮ್ಮ, ಹಿಡಂಬಿಯ ಅಣ್ಣ
ಕತ್ತಲೆಗೂ ಕಪ್ಪು ಮುಖದ, ಹುಳುಕು ಕೆನ್ನೆಯ, ಕ್ರೂರ ಕಣ್ಣಿನ ಗುಮ್ಮನಿವನಣ್ಣ

ಬೇವು ಮರದ ಕೊಂಬೆಯ ಚಾಟಿಯಲ್ಲಿ ಬಡಿದು ನನಗೆ ದೆವ್ವಗಳ ಬಿಡಿಸಿರಣ್ಣ
ಕಪ್ಪು ಹೊಗೆ ಬೀರುತ, ಭೂತ ಬಿಡಿಸುವ, ಮಾಂತ್ರಿಕನ ಶೀಘ್ರದಲಿ ಕರೆಯಿರಣ್ಣ

ಕಟ್ಟು ಕಹಿ ಸರ್ಪ ವಿಷದ ಬಟ್ಟಲು ಇವನ ಬಾಯಿ, ಗಂಟಲಿಗೆ ತುರುಕಿ, ತಳ್ಳಿ
ಈ ಭಯಾನಕ ಹುಚ್ಚು ಕವಿಯ ತಕ ತಕ ಕುದಿಯುವ ಎಣ್ಣೆಯ ಕೊಳದಲ್ಲಿ ತಳ್ಳಿ

ತೊಲಗಿದರೆ ಸಾಕು ಸಾಕಪ್ಪ ನಿಮ್ಮೆಲ್ಲರನು ಸುಮ್ಮನೆ ಕಾಡುವನು ಆ ಕಾಡು ಕುನ್ನಿ
ನನಗೂ, ನಿಮಗೆಲ್ಲರಿಗೂ, ನಮ್ಮ ನಿಮ್ಮಂತಹ ಸಜ್ಜನರಿಗೆಲ್ಲ ಆಗಲೇ ಹಾಯಿ ಎನ್ನಿ

ಶುಕ್ರವಾರ, ಜುಲೈ 9, 2010

ಕಟ್ಟು ಕತೆಗಳ ನಂಬುವರು ನೀವಲ್ಲವೇ?

ಕಟ್ಟು ಕತೆಗಳ ನಂಬುವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಕಟ್ಟು ಕಥೆಗಳ ಕೇಳಿ, ಅವನೆಲ್ಲ ನಂಬಿ ಮತಿಗೆಟ್ಟು, ಕಟ್ಟು ನಿಟ್ಟಾಗಿ ಗಟ್ಟಿ ಭಜಿಸಿದವರು ನೀವಲ್ಲವೇ?
ಬೆಟ್ಟಗಳ ಒಡೆದು, ಕಡೆದು, ಮಂದಿರಗಳ ಕಟ್ಟಿ, ಒಳಗೊಂದು ಪುಟ್ಟ ಗುಡಿ ಮಾಡಿದವರೂ ನೀವಲ್ಲವೇ

ಮಂಟಪಗಳ ಕಟ್ಟಿ, ಪುಟ್ಟ, ಪುಟ್ಟ ಗೊಂಬೆಗಳ ಇಟ್ಟು, ಅದನೆ ನಿಜವೆಂದು ನಟಿಸಿದವರು ನೀವಲ್ಲವೇ?
ಗಟ್ಟಿ ತೆಂಗಿನ ಕಾಯಿಯ ಒಡೆದು, ತಟ್ಟೆಯಲಿ ಗಟ್ಟಿ ತುಪ್ಪದ ದೀಪವ ಹಚ್ಚಿ ಆರತಿಯ ಗೈದವರಲ್ಲವೇ?

ಎಂಟು ಬಗೆ ಮೃಷ್ಟಾನ್ನ, ಗಟ್ಟಿ ಹಾಲಿನ ಪಾಯಸ, ಮುಂದೆ ಇಟ್ಟು, ಕೊನೆಗೆ ಭುಜಿಸಿದವರೂ ನೀವೇ ಅಲ್ಲವೇ?
ತೊಟ್ಟಿಲೊಳು ಪುಟ್ಟ ಕಿಟ್ಟನ ಇಟ್ಟು, ಈಟು, ಆಟು ತೂಗುತ, ಗಟ್ಟಿ ಗೊರಕೆಯ ಹೊಡೆದು ಮಲಗಿದರಲ್ಲವೇ?

ಸೊಟ್ಟ ಮೂತಿಯವನನೂ, ಬಂಟ ಕೋತಿಯನ್ನೂ, ಕೆಟ್ಟ ದಶಶಿರನ ಲಿಂಗವನು ಧರೆಗಿಟ್ಟ ದಿಟ್ಟ ಗಿಡ್ಡಪ್ಪನನೂ,
ಸುಟ್ಟ ಸುಡುಗಾಡಿನ ಬೆಟ್ಟದರಸಿಯ ಪತಿಯನೂ, ತುಂಟ ಕಿಟ್ಟಯ್ಯನನೂ, ಬಲಿಯ ಪುಟ್ಟಗಾಲಲಿ ಮೆಟ್ಟಿದವನನೂ,

ದಿಟವೆಂದು ಗಟ್ಟಿ ಮನಸಿನಲಿ ಅಷ್ಟೂ ಲೊಳಲೊಟ್ಟೆ, ಕಸಕಟ್ಟೆ ಕಾಯಿಯೆಂದು ಇಷ್ಟೂ ತಿಳಿಯದೆ ನಂಬುವುದೇತಕೆ?
ಬಿಟ್ಟು ಬಿಡಿ, ಮುಟ್ಟಿ, ತಟ್ಟಿ ನೋಡಿ ಒಮ್ಮೆ ಗಟ್ಟಿ ಕಲ್ಲನು, ಜೀವವಿಲ್ಲದ ಕಲ್ಲಿಗೆ ಸಿಟ್ಟುಬಾರದು, ಎಂದು ತಿಳಿದರೆ ಸಾಕೆ?

ನಾನಲ್ಲ, ನಾನಲ್ಲ

ನಾನಲ್ಲ, ನಾನಲ್ಲ
ಕೆ. ಆರ್. ಎಸ್. ಮೂರ್ತಿ

ನಾನಲ್ಲ, ನಾನಲ್ಲ, ನಾನಲ್ಲ, ನಾನಲ್ಲ, ಯಾವುದೂ ನಾನಲ್ಲವೇ ಅಲ್ಲ.
ಅದೂ ಅಲ್ಲ, ಮತ್ತದಂತೂ ಅಲ್ಲವೇ ಅಲ್ಲ, ಯಾರದೋ ಸುಳ್ಳು ಎಲ್ಲ.

ಎಷ್ಟು ಹೇಳಿದರೂ ತಲೆಗೆ ಹೋಗದೆ ನಿಮಗೆ? ನನಗಿಲ್ಲ ಏನೂ ಸಂಭಂಧ
ನನಗೆ ಗೊತ್ತಿರಲಿಲ್ಲ ನೀವಿಷ್ಟು ಪೆದ್ದರೆಂದು! ಅಂಧರನು ನಂಬುವನೂ ಅಂಧ

ನಿಮ್ಮ ಮನಕೆ ಬಂದೊಡನೆ ಆಗಿಹೊಗುವುದು ಎಲ್ಲವೂ ಅತಿ ದೊಡ್ಡ ಸುಳ್ಳು
ಭ್ರಮೆಯಾವುದು, ಬ್ರಹ್ಮಯಾವುದು ಎಂಬ ವ್ಯತ್ಯಾಸ ತಿಳಿಯುವುದೆಲ್ಲ ಪೊಳ್ಳು

ಸಕ್ಕರೆಯ ಅರಿವಿರುವ ಇರುವೆಗೆ ಸೌರವ್ಯೂಹದ ಪರಿವೆ ಬರುವುದಾದರೂ ಹೇಗೆ!
ಕೈಹಿಡಿಯ ನಿನ್ನ ಮಿದುಳಿಗೆ ಬ್ರಹ್ಮಾಂಡವೇ ಎಟುಕುವುದೇ? ಅದು ಸಾಧ್ಯ ಹೇಗೆ!

ಹಲವು ಸಾವಿರ ಎಂದು ಕೊಂಡರೂ, ಕೆಲವೇ ಸಾವಿರ ಕಳೆದಿದೆಯೋ ನೀ ಹುಟ್ಟಿ ಬಂದು
ಹುಟ್ಟಿ, ಹುಟ್ಟಿ, ನಾಪತ್ತೆಯಾದವು ಬೆಟ್ಟದಂತಹ ಎಷ್ಟೋ ಪಶು ರಾಶಿಗಳು ಬಲು ಹಿಂದೂ

ನಿನ್ನ ಪುಟ್ಟಿಸಿದ ಭೂಮಿ ತಾಯಿ ಹುಟ್ಟಿ ಬಂದಳು ಮಗಳ ಬೆಳಗುವ ತಂದೆಯ ಹೊಟ್ಟೆಯಿಂದ
ಉರಿಯುವ ಸೂರ್ಯನಂತೆಯೇ ಇರುವರಯ್ಯ ಸಾವಿರ ಸಾವಿರ ಸಾವಿರ ಸಾವಿರ ತಾರ ವೃಂದ

ಮನಕೆ ಎಟುಕದಷ್ಟು ಇವೆಯೋ ಇಂತಹ ತಾರಾವೃಂದಗಳು, ವೃಂದ ಗುಚ್ಛಗಳು ಅನೇಕಾನೇಕ
ಇದನೆಲ್ಲ ಪುಟ್ಟಿಸಿದ ತಂದೆಯೋ, ತಾಯಿಯೋ, ಅದೋ, ಇದೋ, ಅದೆಂತಹದು ತಿಳಿಯ ಬೇಕಾ?

ಯಾವಾಗ, ಎಲ್ಲಿ, ಎಂತು, ಎಷ್ಟು ದೊಡ್ಡ ಬುರುಡೆಯ, ನಿನಗಿಂತ ಕೋಟಿ ಕೋಟಿಯಷ್ಟು ಮಹಾ ಜ್ಞಾನದಷ್ಟು
ಯಾವ ತಾರಾ ಗುಚ್ಛದಲಿ ಅವತರಿಸಿ ಬರುವುದೋ, ಆಗ ಆದೀತೋ ಇಲ್ಲವೇ ಇಲ್ಲವೋ ಹೇಳುವುದು ಕಷ್ಟ

ಒಂದಂತೂ ಖರೆ: ನೀನಲ್ಲ ಎಲ್ಲ ತಿಳಿವವನು, ಇಂದಲ್ಲಾ, ಎಂದೂ ತಿಳಿವವನು ನೀನಂತೂ ಅಲ್ಲವೇ ಅಲ್ಲವೋ
ಯೋಗ ಮುದ್ರೆಯ ಹಾಕು, ಭೋಗದಲಿ ತನ್ಮಯನಾಗು, ಪೊಗಳಿ, ಪೊಗಳಿ, ಪರಿ, ಪರಿಯಲಿ ತಾಳ ಹಾಕೋ

ಕೊನೆಗೆ, ಕೊನೆಯ ಕಾಲವು ಬರುವ ಕಾಲದಲಿ ಎಂತು, ಹೇಗೆ, ಬೇಡಿಕೊಂಡರೂ ನೀನಾಗುವೆಯೋ ಮತ್ತೆ ಮಣ್ಣು
ನೀನಂದು ಕೊಂಡಿರುವ ದೇವರೆಲ್ಲ ಭ್ರಮೆ, ನೀನಂಬಿರುವುದೆಲ್ಲ ಬರೀ ಸುಮ್ಮನೆ, ನಿನ್ನ ತಲೆಯೆಲ್ಲ ಜೇಡಿ ಮಣ್ಣು

ತುಂಟು ಮನ ನನ್ನದು

ತುಂಟು ಮನ ನನ್ನದು
ಕೆ. ಆರ್. ಎಸ್. ಮೂರ್ತಿ

ಕಾಣುವ ಕಲೆಯಲ್ಲಿ ಗೆಲಿಲಿಯೋನ ತಲೆಮಾರಿನವ ನಾನು;
ಜಾಣನವ ತಲೆಯಲ್ಲಿ ಮನೆ ಮಾಡಿ ಅಲೆಗಳ ಎಬ್ಬಿಸುವನು.

ದೂರ ದರ್ಶನವು ನಮ್ಮದೆಂದು ಮರೆಯದಿರಿ, ಅನ್ಯಥಾ ದೂರದಿರಿ,
ನಿಮಗೆ ಕಾಣದ್ದು ನಾವು ಮುಂಚೆಯೇ ಕಂಡರೆ ಸುಮ್ಮನೆ ಬೈಯ್ಯದಿರಿ.

ಚರ್ಚೆಗೆ ಬಾಹಿರ ಚರ್ಚು, ನಿಮ್ಮ ನಂಬದಿರೆ ಏಟು ಬೈಗುಳದ ಚಾಟಿ
ದೇಗುಲದ ಮೂರ್ತಿಯನು ಕಲ್ಲೆಂದುದಕೆನಗೆ ಹೇಳ ಬೇಡಪ್ಪ ಚಾಡಿ

ಹೊಲೆಯ ಸುಂದರ ಅಬಲೆಯ ಹೆಗಲ ಮೇಲೆ ಒಲವಿನ ತೋಳು ನನ್ನದು
ಕೊಪವೇತಕೆ ಅವಳೂ ನಾನೂ ಜಂಟಿಯಲಿ ಎಂಟೇ ಗೇಣು ಸ್ವರ್ಗವಾಗುವುದು

ಸೋಕ್ರಟೀಸನ ಕಟು ಒರಟು ಬಾಯಿ ನನ್ನದಾಗಿರುವಾಗಂತೆಯೇ ಹೇಳುವೆನು
ವಕ್ರವಾದರೂ ದಿಟವು ದಿಟವೇ, ಕಣ್ಣಿಗೆ ಕಂಡಂತೆಯೇ ಚಿತ್ರವನ್ನು ಬಿಡಿಸುವೆನು

ಆಡುವ ಮಾತಿಗೆ ಅತಿಖಾರದ ಮಸಾಲೆ ಒಡಗೂಡಿಸಿದರೆ ಒಮ್ಮೊಮ್ಮೆ,
ಬಂಡನ್ನು ತುಂಬಿಸುವ ಭಂಡತನದ ಓತಿಕ್ಯಾತನೂ ನಾನೇ ಮತ್ತೊಮ್ಮೆ

ಮೆಣಸಿನ ಖಾರವೂ ಬಲು ರುಚಿ; ಹುಳಿಯೂ, ಕಹಿಯೂ ಇರಬೇಕಲ್ಲವೇ!
ನಾಲಗೆಗೆ ನಾಕದ ಕುಣಿತಕ್ಕೆ ಸಕಲ ಸಾಂಬಾರಗಳು ಇರಲೇ ಬೇಕಲ್ಲವೇ!

ಕಾಳಿದಾಸನೂ, ಪೋಲಿ ವಾತ್ಸಾಯನನೂ, ಜಯದೇವನೂ ಬರುವರಯ್ಯ
ವೇದ ವ್ಯಾಸನೂ, ಪೋಲಿ ಕಿಟ್ಟಿಯೂ, ಶೇಕ್ಸಪಿಯರನೂ ಕುಣಿಯುವರಯ್ಯ

ನನ್ನ ತಲೆಯಲಿ ಮನೆ ಮಾಡಿ, ಭಾವ ಭಜನೆಯ ಹಾಡಿಯೆಲ್ಲಾ ಕುಪ್ಪಳಿಸುವರು
ಜೊತೆಗೆ ಮೇನಕೆಯ ಬೆತ್ತಲೆ ಆಟ, ವಿಶ್ವಾಮಿತ್ರರು ಹಿಂದೆಯೇ ಓಡಿ ಬರುವರು

ರಂಗು ರಂಗಿನಾ ಪ್ರಸಂಗ ಬೆಳಗೂ, ರಾತ್ರಿಯೂ, ಎಡೆಬಿಡದೆ ಮನದ ರಂಗದಲಿ
ಮೊದ್ದು ನಿಶ್ಶಬ್ಧದ ಬಿಕೋ ಖಾಲಿಯ ತಲೆಯವರು ನೀವೆಲ್ಲ ಇರಬೇಕು ಪೆಚ್ಚಿನಲಿ!

ಪೆಚ್ಚು ತಲೆಗಿಂತ, ಹುಚ್ಚು ತಲೆಯೇ ಮೇಲು, ಹೆಚ್ಚು ಪುಣ್ಯದ ಗಂಟು ನನದುಂಟು
ಕಿಚ್ಚು ಹಚ್ಚಿ ಜ್ವಾಲೆಯು ಬೆಳಗುತಿರೆ ಬಿಸಿಮನದ ಘಾಸಿಯ ಮನವು ಬಲು ತುಂಟು

ಗುರುವಾರ, ಜುಲೈ 8, 2010

ನಾವಿಕರ ವ್ಯರ್ಥ ಯಾತ್ರೆ

ನಾವಿಕರ ವ್ಯರ್ಥ ಯಾತ್ರೆ
ಕೆ. ಆರ್. ಎಸ್. ಮೂರ್ತಿ

ಬಾಗಿಲೊಳು ಬಾಯ್ಮುಚ್ಚಿ ಒಳಗೆ ಬಾ ಯಾತ್ರಿಕನೆ
ನಿನದಲ್ಲವೀ ಮನೆಯು ಇದಕೆ ಅತೀ ಬೆಲೆಯೂ

ಬಾಯ್ ಬಿಟ್ಟರೆ ಚಾಟಿ ಏಟು, ಮನವ ಹೊರಗಿಟ್ಟರೆ ಹಾಕುವೆವು ಬಾಯಿಗೆ ಬೀಗ
ಗೇಣು ಮಣ್ಣೂ ನಿನ್ನದಿಲ್ಲ, ಹಣವ ತರದೇ ಸಿಗುವುದಿಲ್ಲ, ಮಂಡಿಯೂರಿ ನಡೆ ಬೇಗ

ತಂಗಳು ಸಂತರ್ಪಣೆ ಸಾಲದೇನೋ, ಹೆಚ್ಚು ಕೂಗಿದರೆ ಹಾಕುವೆವು ಕರ್ಟನ್ ಗಿಲೊಟಿನ್
ಮಂಜು ಶೀತಲ ಹೋಳಿಗೆ, ಕನ್ನಡೇತರ ಕವಳ, ಅದೆಂಥದೋ, ರೊಟ್ಟಿ, ಸಾರು, ಹುಳಿಯನ್ನು

ನಾನೇ ರಾಜ, ರಾಜಾಧಿರಾಜ, ನಾ ಕೊಟ್ಟ ಅಪ್ಪಣೆ ಅವಧಿ ಗಡಿಯ ದಾಟುವುದು ಉಂಟೆ
ಚಂದ್ರವಂಶದ ಮುಖ್ಯ ಮಂತ್ರಿ ನೀನಾದರೆನೋ, ಎದುರು ಮಾತನಾಡುವುದು ಉಂಟೆ?

ನಾ ಹುಟ್ಟಿದುದು ಇಂದು, ನನಗೆ ಮಾತ್ರ ಸ್ವಾತಂತ್ರದ ದಿನ, ಮುಚ್ಚು ಬಾಯಿ ಪುರಂದರ
ನನ್ನ ರಂಗವಿದು, ಓಡಿರೋ ಹಿಂದಿರುಗಿ ಬೇಗ ಹಿಂಡು ಮಕ್ಕಳು, ನಿನ್ನ ದಾಸರ ಸಂಸಾರ

ರಂಗ ವಿಠಲನ ದಾಸ ಪುರಂದರನಿಗೇಕೋ, ನನಗೆ, ನನ್ನವರಿಗೆ ಮಾಡಿಸಿದೆ ನಾನೀರಂಗ
ನನಗೆ ತಲೆ ಬಾಗಿ, ಕೈಮುಗಿದು, ಕುಣಿಯುವ ಮಂಗಗಳಿಗೆ ಕೈ ಬೀಸಿ ಕರೆಯುವುದೀ ರಂಗ

ನೀವೆಲ್ಲ ಯಾವಾಗಲೂ ಕನ್ನಡವ ಆಡುವುದೇಕೆ?
ಹಾಕಬೇಡಿರೋ ಚೇಡಿಯ ಛೀಮಾರಿ ಶೀಟಿ ಕೇಕೆ
ಪಾಮರರ ಭಾಷೆ ಲಂಡನ್ನಿನ ತುಂಡು ನನಗೇಕೆ
ನನಗೆ, ನನ್ನ ಮಡದಿ ಮಕ್ಕಳಿಗೆ ತನ್ನಿ ದೊಡ್ಡ ಕೇಕ್

ನಾವೆಲ್ಲಾ ಒಂದೇ ನಾವೆಯ ನಾವಿಕರೆ?

ನಾವೆಲ್ಲಾ ಒಂದೇ ನಾವೆಯ ನಾವಿಕರೆ?
ಕೆ. ಆರ್. ಎಸ್. ಮೂರ್ತಿ

ನಾನೂ ಹೌದು, ನೀವೂ ಹೌದು, ನಮ್ನಿಮ್ಮ ನಾವೆ ಬೇರೆ
ನಾವೆಲ್ಲಾ ಹುಟ್ಟು ಹಾಕುವ ಹರಿಗೋಲುಗಳು ಬೇರೆ ಬೇರೆ

ಅತಿ ಚಿಕ್ಕ ನನ್ನ ದೋಣಿಯಲಿ ಈಗಾಗಲೇ ನೂರಾರು ತೂತು
ಅವರದು, ನಿಮ್ಮದು ಹೆಮ್ಮೆಯ ಹಡಗು ಬಲು ದೊಡ್ಡದಾದೀತು

ಉಪ್ಪು ನೀರು ಕುಡಿದೊಳಗೆ ಈಜುತಿಹೆ, ತೂತು ಅಗಲವಾಗುತಿದೆ
ಮೈ ಒದ್ದೆ, ಮಡಿ ಒದ್ದೆ, ಮತ್ತೆ, ಮತ್ತೆ ಒದ್ದೆ, ಎರಡೂ ಕಾಲು ಒದ್ದೆ

ಅತ್ತ, ಇತ್ತ, ಎತ್ತೆತ್ತಲೂ ನೀರೇನೋ ಎತ್ತರಕೆ ಅಲೆಯಾಡುತಿದೆ
ಎಚ್ಚರವಿರಲಿ, ಕುಡಿಯಬಾರದದನು ಮರುಳೇ ವಿಷದ ಉಪ್ಪಿದೆ

ಗಂಟಿನಲ್ಲಿ ಮಣಗಟ್ಟಲೆ ಹಣ್ಣು, ತರಕಾರಿ ಕಟ್ಟು ತಂದಿಹೆ ತಾನೇ?
ಮುಗಿದರೆ, ಹಸಿವಿಗೆ ಸಾಗರದ ತರಕಾರಿಯಾದರೂ ಸರಿ ತಾನೇ!

ಅಕ್ಕನದು ಬಲು ದೊಡ್ಡ ಹಡಗು, ರನ್ನದ ಕೋಣೆಗಳು ಅವರಿಗೆಲ್ಲ
ಸುವರ್ಣ ಸಿಂಹಾಸನದ ಪೀಠಗಳು ಹಲವು; ನನಗೆ, ನಿನಗೆ ಅಲ್ಲ

ಅವರಿಗೆ, ಮತ್ತವರವರಿಗೆ ಮಾತ್ರ ಆ ಆಸನ ಮೀಸಲು ಮರುಳೆ
ಪರಾಕಿನ ಮೇಲೆ, ಪರಾಕು ಪೇರಿಸಿ ಒದರುತಿರು ಹಗಲು ಇರುಳು

ನನಗೆ, ನಿನಗೆ, ಹೊರಗಿನವರಿಗೆ ಸಿಗುವುದು ಅತ್ಯಲ್ಪ, ಸ್ವಲ್ಪವಷ್ಟೇ
ಚಪ್ಪಾಳೆ ತಟ್ಟಿ, ತಟ್ಟಿ ನಿನ್ನ ಕೈ, ತೋಳುಗಳು ಆದೀತು ಬಲು ಗಟ್ಟಿ

ಪಂಕ್ತಿ ಭೇದ ತಂಗಿಗೂ ಬಂದ ಚಾಳಿ, ಅಕ್ಕನ ಚಾಳಿ ಮನೆ ಮಂದಿಗೆಲ್ಲ
ಅಕ್ಕನೂ ಬೇಡ, ತಂಗಿ, ಇನ್ನು ಮುಂದೆ ತಮ್ಮಂದಿರೂ ಹುಟ್ಟಿದಾಗೆಲ್ಲ

ಜಗಳವನು ಕಾಯುವುದು ನಮ್ಮ ಕುಲವನೇ ಕಾಡಿಸಿದೆ ಬಲು ಹಿಂದೂ
ಆಸನದ ಆಸೆಯ ಕುಲದ ದುರ್ವಾಸನೆ ನಾರುವುದು ಇಂದೂ ಎಂದೆಂದೂ

ಅವಿಭಕ್ತ ಕುಟುಂಬವು ನಿನ್ನ ತಾತನ ಕಾಲದ ಗೊಡ್ಡು ಸಂಪ್ರದಾಯವೋ!
ಒಂದೇ ಕರುಳು ನೂರಾರು ಚಿಂದಿಯಾಗುವುದು ನಮ್ಮ ಹಣೆ ಬರಹವೋ!

ಬುಧವಾರ, ಜುಲೈ 7, 2010

ಕವಿಗಳ ಹತ್ತಾರು ಅವತಾರಗಳು

ಕವಿಗಳ ಹತ್ತಾರು ಅವತಾರಗಳು
ಕೆ. ಆರ್. ಎಸ್. ಮೂರ್ತಿ

ಆ ಕವಿ ಬೇರೆ, ಈ ಕವಿಯೇ ಬೇರೆ;
ಕವಿ ಮನ, ಕುಂಚ, ಅದ್ದಿದ ಬಣ್ಣ ಬೇರೆ.

ಕವಿ ಗಂಡಾದರೆ ಭಾವದ, ಡವ ಡವ
ಕವಿಯತ್ರಿಯಾದರೆ ಮಿಡಿತದ ಭಾವ

ಹದಿಹರೆಯದ ತವಕ, ಇಪ್ಪತ್ತರಾತಂಕ
ಮೂರು, ನಾಲ್ಕು ದಶಕಗಳ ಬೀಗುವಿಕೆ

ದಶಕ ಐದಾದರೆ ಕಾಯಿ ಆದೀತು ಹಣ್ಣು
ಆರು, ಏಳರಲಿ ನೆನಕೆ ಜೀವನದ ಹುಣ್ಣು

ಉಳಿದಿರುವ ದಿನಗಳಲಿ ಭ್ರಮೆಯೇ ಹೆಚ್ಚು
ಅರಳು ಮರುಳು ಉಲಿಸಿದ ಮಾತೆಲ್ಲ ಪೆಚ್ಚು

ಕರುಳಿನ ಕವಿಗಳು ತಂತಿ ಮೀಟುವರು
ನವರಸದ ಪಾಯಸವನೇ ಬಡಿಸುವರು

ಹರಳೆಣ್ಣೆ ಕವಿಯತ್ರಿ ಬಲದಿ ಕುಡಿಸುತ್ತ
ನಿಮ್ಮೆದೆಗೆ ದೊಡ್ಡ ಕತ್ರಿಯನು ಹಾಕುತ್ತ

ಸಂಡಾಸು ಯಾತ್ರೆಗೆ ಆತುರದಿ ಅಟ್ಟುವರು
ಎಲ್ಲ ಮುಗಿದ ಮೇಲೆ ಹಾಯಿ ಅನ್ನುವರು