ಭಾನುವಾರ, ಏಪ್ರಿಲ್ 11, 2010

ಅದೂ ನಾನೇ; ಇದೂ ನಾನೇ

ಅದೂ ನಾನೇ; ಇದೂ ನಾನೇ
ಕೆ. ಆರ್. ಎಸ್. ಮೂರ್ತಿ

ಮುಖ ಎರಡು:
ಇತ್ತ, ಅತ್ತ

ಕಣ್ಣು ಎರಡು:
ಪೂರ್ವ, ಪಶ್ಚಿಮ

ಭಾವವೂ ಎರಡೇ:
ಸುಖ, ದುಃಖ

ಗುಣ ವ್ಯತಿರಿಕ್ತ:
ಇನ್ ಮತ್ತೆ ಯಾಂಗ್

ಬಣ್ಣ ಬೇರೆ-ಬೇರೆ:
ಕಪ್ಪು, ಬಿಳುಪು

ನಾಲಗೆಯದು ಎರಡು ರಸ:
ಖಾರ, ಸಿಹಿ

ಕಿವಿಗೆ ಬಡಿಯುವುದು:
ಕೆಟ್ಟದು, ಒಳ್ಳೆಯದು

ಮೂಗಿಗೆ ಆಘ್ರಾಣ:
ಗಬ್ಬು ಗಂಧ, ಸುಗಂಧ

ಬಾಯಿ ಒಂದೇ. ಆದರೆ!:
ಬಚ್ಚಲು ಬೈಗುಳ, ಸಕ್ಕರೆಯ ನುಡಿ

ಕೆನ್ನೆಗಳು ಎರಡು:
ಒಂದು ಮುದ್ದು, ಇನ್ನೊಂದು ಪೆದ್ದು

ಕೈಗಳೂ ಎರಡು:
ಒಂದರಲ್ಲಿ ನಮನ, ಇನ್ನೊಂದರಲ್ಲಿ ಚಾಕು

ಎರಡು ಕಾಲುಗಳು:
ಒಂದರಲ್ಲಿ ನೃತ್ಯ, ಇನ್ನೊಂದಿರುವುದು ಒದೆಯಲು

ಪಾದಗಳೂ ಎರಡು:
ಒಂದು ಗಂಗೆಯಲ್ಲಿ, ಮತ್ತೊಂದು ವಿಷ್ಣುವಿನ ಎದೆಯನ್ನೇ ಮೆಟ್ಟಲು

ಬೆಳಗ್ಗೆಯೆಲ್ಲಾ ಡಾಕ್ಟರ್ ಜೆಕಿಲ್,
ರಾತ್ರಿಯ ಹೊತ್ತಿಗೆ ಮಿಸ್ಟರ್ ಹೈಡ್

ಮೊಲೆಗಳು:
ಅನುಸೂಯ ಒಂದಾದರೆ, ಪೂತನಿಯ ಬೆಟ್ಟದಂಥ ಮೊಲೆ

ಮಿದುಳಿನಲ್ಲಿನ ಸುಂದರಿಯರು:
ಲಕ್ಷ್ಮಿ, ಸರಸ್ವತಿ

ದೇವನೂ ನಾನೇ, ದಾನವನೂ ನಾನೇ
ರಾಮ-ರಾವಣ, ಕೌರವ-ಪಾಂಡವ,
ಬ್ರಹ್ಮ-ಹರ, ವಾಮನ-ಬಲಿ

ವಿವಾಹ-ವಿಚ್ಛೇದನ:
ವಿವಾಹವೇ ಆಗದೇ ಹೋದರೆ,
ವಿಚ್ಛೇದನೆ ಆಗಬಲ್ಲುದೆ?

ಆಸೆ-ನಿರಾಸೆ:
ಆಸೆಯಿಲ್ಲದೇ ಹೋದರೆ,
ನಿರಾಸೆ ಯಾವುದರ ಮೇಲೆ?

ಬುಧ್ಧನಿಗೆ, ಸ್ಥಿತ ಪ್ರಜ್ಞನಿಗೆ
ಅದೂ ಇಲ್ಲ, ಇದಂತೂ ಇಲ್ಲವೇ ಇಲ್ಲ.

ಹುಲು ಮಾನವ ನನಗೆ:
ಸಾವಿರಾರು ಮುಖ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ