ನೀವೆಲ್ಲರಿರುವೆ
ಕೆ. ಆರ್. ಎಸ್. ಮೂರ್ತಿ
ನಾನಿರುವೆ, ನೀನಿರುವೆ,
ಅವನಿರುವೆ, ಅವಳಿರುವೆ,
ಇವರೆಲ್ಲರಿರುವೆ, ಅವರೆಲ್ಲರಿರುವೆ,
ಅಲ್ಲೂ ಇರುವೆ, ಇಲ್ಲೂ ಇರುವೆ, ಎಲ್ಲೆಲ್ಲೂ ಇರುವೆ
ಹಿಂದೂ ಇರುವೆ, ಮುಂದೂ ಇರುವೆ, ಎಂದೆಂದೂ ಇರುವೆ.
ಇರುವೆ ಲೋಕದಲಿ ಬರೀ ಇರುವೆ.
ಇರುವೆ ಪರ ಲೋಕ ಸೇರಿದ ಮೇಲೆ,
ಇರುವೆಯ ಮರು ಇರುವು;
ಸರಿಯಾದ ಇರುವೆಗೆ ಮರು ಇರುವೆಯ ಇರುವಿಲ್ಲ
ಬೇರೆಯಾದ ಇರುವೆಗೆ ಮರು ಇರುವೆಯ ಇರುವು ಖರೆ.
ಸಾರಿದನು ಸಾವಿರ ಸಾರಿ ಈ
ಸರಿ ಅರಿವನ್ನು ಗುರು ಇರುವೆಯು
ಮರಿ ಇರುವೆಗೂ, ಸಪೂರ ಇರುವೆಗೂ,
ತೋರ ಇರುವೆಗೂ, ಅಸುರ ಇರುವೆಗೂ
"ಮರೆಯ ಬೇಡಿರಿ ಇರುವೆಯ ಇರುವಿನ ಸಾರ
’ಇರುವೆಯ ದೇವರೂ ಇರುವೆ’".
ನೆರೆಹೊರೆಯ ಬಿಲದ, ಇತರ ಮರದ
ಇರುವೆ ಕೂಟದ ಸಾಲು ನೆರೆದರು ಸೇರಿ, ಸೇರಿ;
ನೂರಾಯ್ತು, ಸಾವಿರ ಸಾವಿರವಾಯ್ತು.
ಇರುವೆ ಸಂಸಾರಗಳೆಲ್ಲ ಎರಗಿದವು
ಗುರು ಇರುವೆಗೆ ಅಪಾರ ನಮ್ರತೆಯಲಿ.
ಇರುವೆಗಳು ಪಂಕ್ತಿ, ಪಂಕ್ತಿಯಲಿ
ಸಕ್ಕರೆಯ ಅರ್ಪಣವ ಸೇರುಗಟ್ಟಲೆ ಸುರಿದು
ಗುರುವರನಿಗೆ ಇರುವೆಯ ಸುಂದರಿಯರು ನೀರೆಯರು
ಸುರಿಸಿದರು ತರತರದ ಒಲವನ್ನು
ಬಾರಿ, ಬಾರಿ ಗುರುವಿನ ಮೈಮೇಲೇರಿ.
ಏರಿತು ಗುರುಗಳ ಮದವು
ಮರೆತು ಮೈಮನ ಜೋರಾಗಿ ಒರಲಿದರು
"ಆರೂ ಅಲ್ಲ ಆ ದೇವರು ಇರುವೆ,
ಇರುವೆನು ನಿಮ್ಮೆದುರು ಸುರರೆಲ್ಲರಿಗೆ
ಅರಸು ನಾನು, ಅರಸ ಬಾರದು ಬೇರೆಲ್ಲೂ
ಅರಿಯಿರಿ ಇರುವೆ ಪೌರರೇ
ಅರಿಯಿರಿ ಈ ಪರತತ್ವವನು",
ಒರಲಿದರು ಧೈರ್ಯದಲಿ
"ನೆರೆ ನಂಬಿ ನಾನೇ ಸಕಲವರಿದ ಗುರು’,
ಸರಿಯಾದ ಇರುವೆ ದೇವರು"
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ