ಗುರುವಾರ, ಏಪ್ರಿಲ್ 1, 2010

ಬ್ರಹ್ಮಾಂಡ ತಲೆ ನನ್ನದು

ಬ್ರಹ್ಮಾಂಡ ತಲೆ ನನ್ನದು
ಕೆ. ಆರ್. ಎಸ್. ಮೂರ್ತಿ

ನಾನ್ಯಾರು?
ನನ್ನ ತಲೆಯೊಳಗೇನಿದೆ?
ನನ್ನ ಅಂತರಾಳದೊಳಗೇನಿದೆ?
ತಿಳಿಯಬೇಕೇ?

ಕಿವಿ ನೆಟ್ಟಗೆ ಮಾಡಿ;
ಪದ್ಮಾಸನ ಹಾಕಿ;
ತದೇಕ ಚಿತ್ತವಿರಲಿ;
ಬೇಕಾದರೆ ಬರೆದುಕೊಳ್ಳಿ

ನಿಮ್ಮಿಷ್ಟದಂತೆ ದೊಡ್ಡ ಡಂಗುರವನ್ನೇ ಹೊಡಿಸಿ,
ನನ್ನದೆಂಥ ಪ್ರಚಂಡ ಬ್ರಹ್ಮಾಂಡ ತಲೆಯೆಂದು.

ನಿಮಗೆ ವಾಕರಿಕೆಯಾದರೆ, ಸ್ವಲ್ಪ ನುಂಗಿಕೊಳ್ಳಿ;
ನಿಮ್ಮ ಮಡಿ ತಲೆಗೆ ಮೈಲಿಗೆಯಾದರೆ,
ಅದು ನಿಮ್ಮ ಹಣೇಬರಹ; ಪ್ರಾರಬ್ಧ ಕರ್ಮ.


ನಾನು ಬಲುತುಂಟ;
ಅತಿಕೊಬ್ಬಿನ ಮೇಧಾವಿ;
ಉಲ್ಬಣಿಸಿದ ಘಾಸಿಯ ಹುಚ್ಚು ಬಿಳಿ ಕುದುರೆ;
ಅರವತ್ತು ನಾಲ್ಕಿಗೂ ಮೀರಿದ ವಿದ್ಯಾವಂತ;
ಹಿಂದೆಂದೂ ಹುಟ್ಟಿ ಬಂದಿರದ ಉಧ್ಧಂಡ.

ನಾನು ತಪಸ್ಸಿಗೆ ಕುಳಿತರೆ,
ಹೊಸ ಲೋಕವನೇ ಸೃಷ್ಟಿಸಿದ
ವಿಶ್ವಾಮಿತ್ರನೇ ಬೀಳುವನು ಎರಗಿ ನನ್ನ ಕಾಲಡಿಗೆ

ನನ್ನ ಬಾಯಿಂದ ಹರಿವಾಗ ವಾಕ್ಗಂಗೆ
ವೇದವ್ಯಾಸರಿಗೆ ಲೇಖನ ಹಿಡಿದ
ಆನೆ ತಲೆಯು ಓಡಿ ಬರುವನು ಲೇಖನನಾಗಿ ನನಗೆ

ಹಿಂದೆ ಎಂದೂ ಹುಟ್ಟಿ ಬರದ ಗರ್ವಿ
ರಾವಣನಿಗೂ ಮೀರಿದ ಅಹಂಕಾರ
ಹಿರಣ್ಯ ಕಶಿಪುವನ್ನೇ ನಾಚಿಸುವ ಮದ
ಕೌರವೇಶ್ವರನಿಗೂ ಹೆಚ್ಚಿನ ಹೆಣ್ಣಿನ ಹುಚ್ಚು

ಗೊಲ್ಲನಿಗೆ ತಲೆ ಬಾಗದ,
ಸುಡುಗಾಡು ಅಲೆದಾಡುವ ವಿಭೂತಿ ಮಯ್ಯಿನ
ಪರಶಿವನಿಗೇ ಕೈಮುಗಿಯದ
ಹೆಂಡತಿಯ ಪತ್ತೆಯಿಲ್ಲದೆ
ಕಣ್ಣೀರಿಟ್ಟ ರಾಮನಿಗೆ ಎರಗದ
ಅವನ ಸೇವಕ ಕಪಿಗೆ ಬೆಲೆಕೊಡದ
ಸದಾ ತಪಸಿ ಕಮಲಾಸನನ ನೆನೆಯದ
ಭಂಡ, ಮೊಂಡ, ಚಂಡ ಪ್ರಚಂಡ
ಬ್ರಹ್ಮಾಂಡಕೂ ಬೃಹತ್ ತಲೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ