ತುಂಟ ಕುಂಚ
ಕೆ. ಆರ್. ಎಸ್. ಮೂರ್ತಿ
ಕೋಮಲ ಕುಸುಮಕೂ ಸುಂದರ ಕೋಮಲೆ ನಾನು
ಸುಗಂಧ ಬೀರುತ್ತಾ, ರಸಿಕರಿಗೆ ಹಂಚುವೆನು ಜೇನು
ನಿಮ್ಮ ಮನವನು ಸೆಳೆದು ಒಯ್ಯುವೆನು ಬಲು ದೂರ:
ವನವಿಹಾರ, ಪ್ರಕೃತಿಯ ಅಪಾರ, ಸಮುದ್ರದ ತೀರ
ಪ್ರೇಮಿಗಳ ಸಲ್ಲಾಪ, ಚೆಲ್ಲಾಟ; ವಿರಹಿಗಳ ನೆನಪಿನಾಳ
ಮೇಘ ಸಂಚಾರಿಯೂ ನಾನು, ಕಾಳಿದಾಸನ ಅಡಿಯಾಳ
ಪುಟ್ಟ ಕಂದನ ಕೇಕೆ, ಅಮ್ಮನ ಮಡಿಲಲ್ಲಿ ಮಲಗುವ ಅಂದ
ಮೊಲೆಯನು ಕೈಲಿ ಪಿಡಿದು ಹಾಲನು ಹೀರುವ ಚಿನ್ನನ ಚೆಂದ
ಹೌದು ನಾನಾಗ ಕುಸುಮಕೂ ನಯ, ಮೋಡ ಏರಲು ಹಗುರ
ಬರೆದ ಕವಿಗೆ ಅಮಿತಾನಂದ, ಓದುಗರಿಗೆ ಆನಂದದ ಸಾಗರ
ಪೌರ ಜವಾಬ್ದಾರಿ ವಿಹೀನ, ಪುಂಡ ಪುಡಾರಿ, ಲಂಚಗುಳಿಗಂತೂ
ಛೇಡಿಸಿ ಚಾಟಿಯೇಟು, ಛೀಮಾರಿಯ ಮೋರಿಯಲಿ ಕೊಳಕು ಜಂತು
ನಿನಗೆ ಚಾವಟಿ ಏಟು ಹೊಡೆದ ರಭಸಕೆ ಲೇಖನಿ ನಾನು ರಕ್ತ ಕಾರುವೆ
ಗೊರಕೆ ಹೊಡೆಯುವ ಪುರಜನರ ಪೌರ ಪುರುಷತ್ವವನೇ ಬಡಿದೆಬ್ಬಿಸುವೆ
ಕವನ, ಕಥೆ, ಕಾದಂಬರಿ, ಕೊಂಕು ಇಂಕಿನ ಚುಟುಕದ ಛೂಬಾಣದ ಸ್ಫೋಟ
ಪದ ಬಾಣದ ಬತ್ತಳಿಕೆಯ ಸರ್ಪಾಸ್ತ್ರ, ಅಗ್ನ್ಯಾಸ್ತ್ರ, ಸಂಮೊಹನಾಸ್ತ್ರದ ಚೆಲ್ಲಾಟ
ರಸಋಷಿಗಳ ವರದಾನದ ಅಳೆದು, ಬೆರೆಸಿ, ಲೆಕ್ಕ ಹಾಕಿದ ಮಾತ್ರೆಗಳ ಕಾವ್ಯ
ನಗೆ, ನಾಟಕ, ದಿಡೀರನೆ ಚೆಲ್ಲುವೆನು ವಿಡಂಬನೆ, ಪೌರ ಪತ್ರಿಕೋದ್ಯಮದ ಹವ್ಯ
ವಿವಿಧ, ವಿಚಿತ್ರ, ಪರಿ, ಪರಿ ಭಾವ ಒಂದಲ್ಲ, ಎರಡಲ್ಲ ಸಾವಿರಾರು ಚಮತ್ಕಾರ
ನವರಸದ ರಸಾಯನದ ರಂಗುರಂಗಿನ ಇಂಕಿನ ಔತಣವ ಬಡಿಸುವೆ ಕಂಠಪೂರ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ