ಸೋಮವಾರ, ಜೂನ್ 14, 2010

ಉಗಾದಿಯ ಉಲ್ಲಾಸ

ಉಗಾದಿಯ ಉಲ್ಲಾಸ

ನೋಡೋಣ ಬನ್ನಿ, ಬೇವು ಬೆಲ್ಲವ ತನ್ನಿ, ನಮ್ನಿಮ್ಮ ಒಡನಾಟದ ಮಾಯವಿದು
ಕಹಿಯೆಲ್ಲ ಸಿಹಿಯಾಯ್ತು, ಮನಸೆಲ್ಲ ಹಗುರಾಯ್ತು, ನಮ್ಮೆಲ್ಲರ ಊರಿದು
ಉಗಾದಿಯ ಉಲ್ಲಾಸಕೆ ಎನ್ನ ಬುಟ್ಟಿಯ ಫುಲ್ಲ ಕುಸುಮವೂ ನಗೆ ಬೀರುತಿದೆ
ಬನ್ನಿರಿ ನೀವೆಲ್ಲಾ ನೋಡೋಣ ಹೆಮ್ಮೆಯಲಿ ನಮ್ಮೂರ ಸಂತಸದ ಹಬ್ಬವಿದು

ಹಸಿರು ತೋರಣ, ಚಿಗುರು ಮಾವಿನ ಎಲೆ, ಹಸಿರು ಗೊಂಚಲು ಕೈ ಬೀಸಿ ಕರೆಯುತಿದೆ
ರಂಗು ರಂಗಿನ ರಂಗವಲ್ಲಿಯೂ ಸಂಭ್ರಮವ ಬೀರುತಿದೆ ಹೊಸ್ತಿಲೊಳು ಕಾಲಿಡುತಿರೆ
ಕೇಳಬರುತಿದೆಯೇ ಮಕ್ಕಳ ಕಿಲ ಕಿಲ ದನಿಯಲ್ಲಿ ನಿಮ್ಮ ಕಿವಿ ಮೆಚ್ಚಿಸುವ ಆನಂದದ ಹಾಡು
ಮೊಮ್ಮಕ್ಕಳ ಬೆನ್ನೆತ್ತಿ, ನೆತ್ತಿಯ ಮೇಲೆ ತುಪ್ಪವನಿಡಲು ಕಾತುರದಿ ಹಾತೊರೆವ ಅಜ್ಜಿ ಪಾಡು

ಅಭ್ಯಂಜನವ ಮುಗಿಸಿ ಬರುತಿಹಳು ಮನೆಯ ಒಡತಿ ಒದ್ದೆಯ ತಲೆಯನ್ನು ಒರೆಸುತ್ತ ಬಟ್ಟೆಯಲಿ
ಒಳಗೆ ಬಂದವಳ ಕಾತುರದಿ ಕಾಣುತಿಹರು ಒಲವಿನಲಿ ರಾಯರು ಕೈಯಲ್ಲಿ ಮಾತ್ರ ಜನಿವಾರದ ಮೇಲೆ
ವರುಷ ಪೂರ್ತಿ ಕಣ್ತುಂಬಿ ನೋಡಿಹರೂ ತಮ್ಮ ಮಡದಿಯನು ಹೊಸ ವರುಷದಲಿ ಬೇರೆ ಹರುಷವಲ್ಲವೇ
ಇದನು ಗಮನಿಸಿದ ಒಡತಿ ತುಟಿ ಮುಚ್ಚಿ ನಗೆ ಬೀಸುತಿರೆ, ಕೆನ್ನೆ ಮಾತ್ರ ಮಾವಿನ ಹಣ್ಣಿಗಿಂತ ಕೆಂಪಲ್ಲವೇ

ಬಂದಿತೋ ಹೊಸ ಉಗಾದಿ, ತಂದಿಹುದೋ ಜೇನಿಗೂ ಸವಿಯಾದ ಬೆಲ್ಲದುಂಡೆಯ ತಿಂಗಳುಗಳೇ ಸಿಹಿಯಾಯ್ತು
ಇರಲಿ ಮಧ್ಯೆ ಬೇವಿನಾ ಚಿಗುರು, ಮಾಡಲಿ ಮತ್ತೆ ಬರುವ ಸಿಹಿದಿನಗಳ ಇನ್ನಷ್ಟು ಮತ್ತಷ್ಟು ಮೆಲುಕಿದರಾಯ್ತು
ಪಂಚಾಂಗವ ಓದಿ, ಗ್ರಹ ಗತಿಯನು ತಿಳಿದು, ಗುರು, ಶುಕ್ರ, ಶನಿ, ಚಂದಿರನೂ ಮಂಗಲನೂ ಏನೆಲ್ಲ ತಂದರಾಯ್ತು
ನಾವು ಮಾತ್ರ, ನೀವು, ನೀವು, ಅವರು, ಉಳಿದವರೆಲ್ಲ ನಗು ನಗುತ ನಗುವ ಸಾರುತ ಒಲುಮೆ ಬೀರಿದರಾಯ್ತು

ಇದೆ ಉಗಾದಿಯ ಸಾರ, ಇದೆ ಚೆಲುವಿನ ಗೆಲುವು, ಇದಲ್ಲವೇ ನಮ್ಮೆಲ್ಲರ ಸಂತಸದ ಗುಟ್ಟು, ನಮ್ಮೆಲ್ಲರ ಒಗ್ಗಟ್ಟು
ಹಾಡೊಣ ಬನ್ನಿರಿ ಹೊಸ ದಿನದ ಹಾಡು, ಕುಣಿಯೋಣ ಬನ್ನಿರೀ, ಕರೆದು ಬನ್ನಿ ಕೈ ಕೈ ಜೋಡಿಸುತ ನೆಗೆದು ಹೆಜ್ಜೆಯಿಟ್ಟು
ನಗುವ ಚೆಲ್ಲಿರಿ, ನಕ್ಕು ಅರಳಿದ ಮಲ್ಲಿಗೆಯ ಚೆಲ್ಲಿರಿ, ಸಿಹಿ ದಾಳಿಂಬೆ, ಮಾವಿನ ರಸಕೂ ಸಿಹಿಯಾದ ಒಡನಾಟದ ನಂಟು
ನಿಮ್ಮ ಒಡಲಿನ ಬೆಲ್ಲವ ಎಲ್ಲರ ಮಡಲಿನಲ್ಲಿ ನೀಡುತ್ತಾ ನಡೆವಾಗ ಮತ್ತೆ ಮಾಯದಲಿ ಹಿರಿದಾಗಲಿ ನಿಮ್ಮ ಮಡಲ ಗಂಟು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ