ಗುರುವಾರ, ಜುಲೈ 8, 2010

ನಾವೆಲ್ಲಾ ಒಂದೇ ನಾವೆಯ ನಾವಿಕರೆ?

ನಾವೆಲ್ಲಾ ಒಂದೇ ನಾವೆಯ ನಾವಿಕರೆ?
ಕೆ. ಆರ್. ಎಸ್. ಮೂರ್ತಿ

ನಾನೂ ಹೌದು, ನೀವೂ ಹೌದು, ನಮ್ನಿಮ್ಮ ನಾವೆ ಬೇರೆ
ನಾವೆಲ್ಲಾ ಹುಟ್ಟು ಹಾಕುವ ಹರಿಗೋಲುಗಳು ಬೇರೆ ಬೇರೆ

ಅತಿ ಚಿಕ್ಕ ನನ್ನ ದೋಣಿಯಲಿ ಈಗಾಗಲೇ ನೂರಾರು ತೂತು
ಅವರದು, ನಿಮ್ಮದು ಹೆಮ್ಮೆಯ ಹಡಗು ಬಲು ದೊಡ್ಡದಾದೀತು

ಉಪ್ಪು ನೀರು ಕುಡಿದೊಳಗೆ ಈಜುತಿಹೆ, ತೂತು ಅಗಲವಾಗುತಿದೆ
ಮೈ ಒದ್ದೆ, ಮಡಿ ಒದ್ದೆ, ಮತ್ತೆ, ಮತ್ತೆ ಒದ್ದೆ, ಎರಡೂ ಕಾಲು ಒದ್ದೆ

ಅತ್ತ, ಇತ್ತ, ಎತ್ತೆತ್ತಲೂ ನೀರೇನೋ ಎತ್ತರಕೆ ಅಲೆಯಾಡುತಿದೆ
ಎಚ್ಚರವಿರಲಿ, ಕುಡಿಯಬಾರದದನು ಮರುಳೇ ವಿಷದ ಉಪ್ಪಿದೆ

ಗಂಟಿನಲ್ಲಿ ಮಣಗಟ್ಟಲೆ ಹಣ್ಣು, ತರಕಾರಿ ಕಟ್ಟು ತಂದಿಹೆ ತಾನೇ?
ಮುಗಿದರೆ, ಹಸಿವಿಗೆ ಸಾಗರದ ತರಕಾರಿಯಾದರೂ ಸರಿ ತಾನೇ!

ಅಕ್ಕನದು ಬಲು ದೊಡ್ಡ ಹಡಗು, ರನ್ನದ ಕೋಣೆಗಳು ಅವರಿಗೆಲ್ಲ
ಸುವರ್ಣ ಸಿಂಹಾಸನದ ಪೀಠಗಳು ಹಲವು; ನನಗೆ, ನಿನಗೆ ಅಲ್ಲ

ಅವರಿಗೆ, ಮತ್ತವರವರಿಗೆ ಮಾತ್ರ ಆ ಆಸನ ಮೀಸಲು ಮರುಳೆ
ಪರಾಕಿನ ಮೇಲೆ, ಪರಾಕು ಪೇರಿಸಿ ಒದರುತಿರು ಹಗಲು ಇರುಳು

ನನಗೆ, ನಿನಗೆ, ಹೊರಗಿನವರಿಗೆ ಸಿಗುವುದು ಅತ್ಯಲ್ಪ, ಸ್ವಲ್ಪವಷ್ಟೇ
ಚಪ್ಪಾಳೆ ತಟ್ಟಿ, ತಟ್ಟಿ ನಿನ್ನ ಕೈ, ತೋಳುಗಳು ಆದೀತು ಬಲು ಗಟ್ಟಿ

ಪಂಕ್ತಿ ಭೇದ ತಂಗಿಗೂ ಬಂದ ಚಾಳಿ, ಅಕ್ಕನ ಚಾಳಿ ಮನೆ ಮಂದಿಗೆಲ್ಲ
ಅಕ್ಕನೂ ಬೇಡ, ತಂಗಿ, ಇನ್ನು ಮುಂದೆ ತಮ್ಮಂದಿರೂ ಹುಟ್ಟಿದಾಗೆಲ್ಲ

ಜಗಳವನು ಕಾಯುವುದು ನಮ್ಮ ಕುಲವನೇ ಕಾಡಿಸಿದೆ ಬಲು ಹಿಂದೂ
ಆಸನದ ಆಸೆಯ ಕುಲದ ದುರ್ವಾಸನೆ ನಾರುವುದು ಇಂದೂ ಎಂದೆಂದೂ

ಅವಿಭಕ್ತ ಕುಟುಂಬವು ನಿನ್ನ ತಾತನ ಕಾಲದ ಗೊಡ್ಡು ಸಂಪ್ರದಾಯವೋ!
ಒಂದೇ ಕರುಳು ನೂರಾರು ಚಿಂದಿಯಾಗುವುದು ನಮ್ಮ ಹಣೆ ಬರಹವೋ!

ಬುಧವಾರ, ಜುಲೈ 7, 2010

ಕವಿಗಳ ಹತ್ತಾರು ಅವತಾರಗಳು

ಕವಿಗಳ ಹತ್ತಾರು ಅವತಾರಗಳು
ಕೆ. ಆರ್. ಎಸ್. ಮೂರ್ತಿ

ಆ ಕವಿ ಬೇರೆ, ಈ ಕವಿಯೇ ಬೇರೆ;
ಕವಿ ಮನ, ಕುಂಚ, ಅದ್ದಿದ ಬಣ್ಣ ಬೇರೆ.

ಕವಿ ಗಂಡಾದರೆ ಭಾವದ, ಡವ ಡವ
ಕವಿಯತ್ರಿಯಾದರೆ ಮಿಡಿತದ ಭಾವ

ಹದಿಹರೆಯದ ತವಕ, ಇಪ್ಪತ್ತರಾತಂಕ
ಮೂರು, ನಾಲ್ಕು ದಶಕಗಳ ಬೀಗುವಿಕೆ

ದಶಕ ಐದಾದರೆ ಕಾಯಿ ಆದೀತು ಹಣ್ಣು
ಆರು, ಏಳರಲಿ ನೆನಕೆ ಜೀವನದ ಹುಣ್ಣು

ಉಳಿದಿರುವ ದಿನಗಳಲಿ ಭ್ರಮೆಯೇ ಹೆಚ್ಚು
ಅರಳು ಮರುಳು ಉಲಿಸಿದ ಮಾತೆಲ್ಲ ಪೆಚ್ಚು

ಕರುಳಿನ ಕವಿಗಳು ತಂತಿ ಮೀಟುವರು
ನವರಸದ ಪಾಯಸವನೇ ಬಡಿಸುವರು

ಹರಳೆಣ್ಣೆ ಕವಿಯತ್ರಿ ಬಲದಿ ಕುಡಿಸುತ್ತ
ನಿಮ್ಮೆದೆಗೆ ದೊಡ್ಡ ಕತ್ರಿಯನು ಹಾಕುತ್ತ

ಸಂಡಾಸು ಯಾತ್ರೆಗೆ ಆತುರದಿ ಅಟ್ಟುವರು
ಎಲ್ಲ ಮುಗಿದ ಮೇಲೆ ಹಾಯಿ ಅನ್ನುವರು

ಶನಿವಾರ, ಜೂನ್ 19, 2010

ಜಾಣತನದ ಕೋಣ

ಜಾಣತನದ ಕೋಣ
ಕೆ. ಆರ್. ಎಸ್. ಮೂರ್ತಿ

ಆಣೆ ಕೊಟ್ಟು, ಜಾಣತನದಲಿ ಮರೆತಂತೆ ಅಲ್ಲ ಪೆದ್ದು ಜಾಣ ಮರಿ
ನಿನ್ನ ಮರೆವಿನ ನೆವಕೆ ಓ ಗೊಡುವುದಿಲ್ಲವೋ ಎಮ್ಮೆ ಕೋಣನ ಏರಿ

ಬರುವ ಕಾಲ ರಾಯ. ಜಾಣ ಮರೆವು, ಕೋಣನರಿವು ಎರಡೂ ಇರಲಿ
ಜಾಣನೋ, ನೀ ಕೋಣನೋ, ಕೋಣ ವಾಹನನು ಖಂಡಿತದಲಿ ಹೇಳಲಿ

ಯಮನ ಸಭೆಯಲ್ಲಿ ಎಳೆದು ತಂದಾಗ ನೀ ಆಗುವೆಯೋ ತಲೆ ಬಾಗಿ ಕುಕ್ಷಿ
ನಿನ್ನ ಕಪಟ ನಾಟಕವೆಲ್ಲ ನಡೆಯದು, ನಿಜದಿ ನಿನ್ನ ಕಾಯುವುದು ಮನಸ್ಸಾಕ್ಷಿ

ಶುಕ್ರವಾರ, ಜೂನ್ 18, 2010

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ
ಕೆ. ಆರ್. ಎಸ್. ಮೂರ್ತಿ

ಅತ್ತೆ ಸೊಸೆಯರ ಕಲಹ ನನಗೆ ಶಾಪ
ಒಬ್ಬಳು ದುಡ್ಡು ಹಿಡಿದಿಟ್ಟು ಕೈ ಬಿಗಿಯಪ್ಪ

ಮತ್ತೊಬ್ಬಳು ಅತಿ ಜಾಣೆ, ವೀಣಾ ಪ್ರವೀಣೆ
ಸೊಸೆ ಎಲ್ಲೇ ಇದ್ದಲ್ಲಿ ಅತ್ತೆಮ್ಮ ಮಾತ್ರ ಕಾಣೆ

ಅತ್ತೆಗೆ ಮುದಿಗೋಪ, ಸೊಸೆಗೆ ಅತಿ ಹೆಮ್ಮೆ
ನನಗೆ ಮಾತ್ರ ಆದೂ, ಇದೂ ಎರಡೂ ಕಮ್ಮಿ

ಲಕುಮಿಗೆ ಸೊಕ್ಕು, ನನ್ನ ಕಡೆಗೆ ಬರುವುದುಂಟೇ!
ಹುಟ್ಟು ಪೆದ್ದನಿಗೆ ಸರಸತಿಯು ದಕ್ಕುವುದು ಉಂಟೆ

ಸೊಸೆಯ ಕಾಲು ಹಿಡಿದು ಅತ್ತು ಬೇಡಿಯೂ ಆಯಿತು:
"ಒಂದೇ ರಾಗದ ವರ ಸಾಕು ನೀನು ಕೊಟ್ಟರಾಯಿತು"

"ಸರಿಯಾಗಿ ಸರಿಗಮ ಸರಾಗದಲಿ ಹಾಡುವ ಹಂಬಲು"
"ಕೊಡೆ ಒಮ್ಮೆ ವೀಣೆಯನು ನನ್ನ ಬೆರಳಿಂದ ಮೀಟಲು"

ಅದಕ್ಕೆ ಮಧುರ ವಾಗ್ದೇವಿಯ ವಾದ ಏನು ಗೊತ್ತಾ?
"ಒಡಕು ಕಿವಿ, ಕಾಗೆಯ ಕಂಠ, ನಿನಗೇಕೆ ಸಂಗೀತ?"

ಅಸಮಾನ ಸುಂದರಿಯ ಚೆಲ್ಲಾಟದಲಿ ಒಲಿಸುವೆನೆಂದು
ಗುಂಡು ಬುರುಡೆಯ ಮುಟ್ಟುವ ಆಸೆ ಉಲ್ಬಣವಾಯಿತೆಂದು

ಅವಳ ಮುದಿ ಗಂಡನು ಎಂಟೂ ಕಣ್ಣು ಮುಚ್ಚಿರುವಾಗ
ನನ್ನ ಕೈ ಬೆರಳಿಂದ ಅವಳ ವೀಣೆಯ ಮೀಟುತಿರುವಾಗ

ಬಂದಳಪ್ಪಾ ಬಂದಳು ಧನ ಲಕ್ಷ್ಮಿ ಕೆಂಡ ಕಣ್ಣಿನಲ್ಲಿ ಸುಟ್ಟಳು
"ನಿನಗೆಂದೂ ಬಿಡಿಗಾಸೂ ಬರದಿರಲೆಂದು" ಶಾಪವ ಕೊಟ್ಟಳು

ನಂಬಿ ಕೆಟ್ಟವರು ನೀವಲ್ಲವೇ?

ನಂಬಿ ಕೆಟ್ಟವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಎಕ್ಕಡವ ತನ್ನ ತಲೆಯ ಮೇಲಿಟ್ಟು
ಬಿಕ್ಕಿ, ಬಿಕ್ಕುತಲಿ ಅತ್ತು ಕಣ್ಣೀರಿಟ್ಟು

ಅಗ್ರಜನ ಆಶ್ರಮದಿಂದ ಬಂದ ಆಚೆ
ಹೊತ್ತು ನಡೆಸಿದ ರಾಜ್ಯ ಭಾರದ ಹೆಜ್ಜೆ

ಅಣ್ಣನ ಪಾದುಕೆಯು ತಮ್ಮನ ಮೇಲೋ?
ತಮ್ಮನ ಒಲವಿನ ಭಾರ ಅಣ್ಣನ ಮೇಲೋ?

ಹಣೆಯ ಬರಹವಿದೇನು ರಾಜ ಕುವರರಿಗೆ?
ಇತ್ತ ವಾಕ್ಯದ ಹೊಣೆಯು ಹೊತ್ತ ನಾಲ್ವರಿಗೆ.

ದಶರಥನ ರತಿಯು ಮತಿಕೆಟ್ಟ ಕೆಟ್ಟ ಕನ್ಯೆಯೋ?
ಭೂಪತಿ ಪತಿಯು ಶತ ಷಂಡ ಹುಚ್ಚು ಕುನ್ನಿಯೋ?

ರಾಜನ ಪ್ರಜೆಗಳಿಗೂ ಮಂಕು ಕವಿಸಿದ ಕೊಂಕನಾರು?
ಓದುಗರಿಗೆಲ್ಲಾ ಕಣ್ಣೀರ ನದಿಯನ್ನೇ ಸುರಿಸಿದವನಾರು?

ಕಾವ್ಯ ಕರ್ತ ಕವಿ ನಿಜವಾಗಿಯೂ ಹುಟ್ಟು ಬೇಡನೋ?
ತನ್ನ ಗೋತ್ರವನೇ ಬಚ್ಚಿಟ್ಟು ಬೇಡ ತಾಪಸಿಯಾದನೋ?

ಓದಿದೆಲ್ಲವ ಮೂಢತೆಯಲಿ ನಿಜವಿರಲೇ ಬೇಕೆಂದು ನಂಬಿ
ಕಥೆಯ ನಾಯಕನೇ ಸಾಕ್ಷಾತ್ ನಾರಾಯಣನೆಂದು ನಂಬಿ

ತನ್ನ ಪ್ರಜೆಗಳನು ಕೈಬಿಟ್ಟು ಮೂಢತನದಿ ಕಾಡಿಗೆ ಹೋದವನ
ಸತಿ ಸೀತೆಯನು ರಕ್ಕಸನಿಗೆ ಕಳೆದುಕೊಂಡಾಗ ಬಿಕ್ಕಿ ಅತ್ತವನ

ಹೆಂಡತಿಗೋಸ್ಕರವಾಗಿ ವೈರವನು ಕಟ್ಟಿ, ದಾನವ ರಾವಣನನು
ಗೆಲ್ಲುವ ಗುರಿ ಹೊತ್ತು, ವಾನರ ಸೈನ್ಯವ ಮೊರೆಹೋಗಿ ಹೋದವನು

ಯುಧ್ಧವನು ಗೆದ್ದವನು ರಾಮನಲ್ಲ, ಲಕ್ಷ್ಮಣನೂ ಅಲ್ಲ, ವಾನರರು
ಗೆದ್ದಾದಮೇಲೆ, ಸೀತೆಯನು ತೊರೆದು ತನ್ನನೇ ತಾನು ಸೋತವನು

ಬಸುರಿ ಹೆಂಡತಿಯನ್ನು ಊರು ಬಿಟ್ಟು ಮತ್ತೆ ಕಾಡಿಗೆ ಅಟ್ಟಿದವನು
ಅವಳಿ ಜವಳಿ ಲವ ಕುಶರ ಬಾಲ ಲೀಲೆಗಳನು ಕಾಣದ ಕುರುಡನು

ಕಂಡು, ಕಂಡೂ, ಬೇಡನ ಕಥೆಯನ್ನು ಓದಿ, ಕೇಳಿ, ಮಾನವನನು
ನಾರಾಯಣನೇ ಇರಬೇಕೆಂದು ನಂಬಿ ಕಟ್ಟಿದ್ದಾಯ್ತು ದೇಗುಲಗಳನು

ನಿಮಗೆಲ್ಲರಿಗೂ ಬರುವುದೇ ಬುಧ್ಧಿ? ತೆರೆಯುವುದೆಂದು ಕುರುಡು ಕಣ್ಣು?
ತಿಳಿಯುವುದೆಂದು ಕವಿ ಕಾವ್ಯ ಚಳಕದಿ ಕಣ್ಣಿಗೆ ಎರೆಚಿದನೆಂದು ಮಣ್ಣು?

ಈಕವಿಯು ಎಲ್ಲರ ಕವಿ

ಈಕವಿಯು ಎಲ್ಲರ ಕವಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಈಕವಿಯ ನಾಮ ಕಾರಣದ ನಿಜ ಕವಿಯೇ ನಾನು
ಸವಿಯಾದ ಹೆಸರಿತ್ತ ನಾಮಕರಣದ ಪುರೋಹಿತನೂ

ಒಂದಲ್ಲಾ ಎರಡು ಸಂಕೇತದ ಶುಭ ನಾಮ ಇರಲೆಂದು
ಈ ಕವಿಯು ನಿಮ್ಮ ಎಲ್ಲರ ಕವಿಯೂ ಆಗಿರಲಿಯೆಂದು

ಸುಕುಮಾರ ಸ್ವಾಮಿಗಳ ಎರಡೂ ಪಾದುಕೆಯ ಮೇಲೆ
ಕಂದನನು ಮಲಗಿಸಿ ಇಟ್ಟು, ಕಣ್ಣೀರಿಟ್ಟು ಬಿಟ್ಟಾದ ಮೇಲೆ

ಬಹು ದೂರದಿಂದ ನಾನೇ ಪುಟ್ಟಿಸಿದಂಥ ಪುಟ್ಟ ಕವಿಯು
ಬೃಹತ್ತಾಗಿ ಆಲದ ಮರವಾಗಿ ಬೆಳೆದು ಇಡೀ ಭುವಿಯು

ಈ ಕವಿಯ ಕಾಮಧೇನು ಕಾವ್ಯದ ಸುಧೆಯನ್ನು ಉಂಡು
ಬಂಟರು ಸವಿಯ ಮೆದ್ದು ಅಮೃತವಾದ ಕವಿಯ ಬಂಡು

ಸ್ವಾಮಿಗಳು ಸನ್ಯಾಸಕೇ ಬಿಟ್ಟು ಬಿಟ್ಟರು ಪೂರ್ಣ ತರ್ಪಣ
ಸಂಸಾರಿಯಾಗಿ ಕೊಟ್ಟರು ಭುವಿಗೆ ಕವಿಯ ಸಾರದ ಅರ್ಪಣ

ಬೆಳೆದು ಬಲವಾಯ್ತು ಕವಿ ಸಂಸಾರ ನೂರು ಸಾವಿರವಾಗಿ
ಆಗಿಹೋಯಿತು ಕೂಡಿ, ಕೂಡಿ ಸಹಸ್ರವು ಕೋಟಿಯೂ ಆಗಿ

ಮುಕ್ಕೋಟಿ ಕನ್ನಡಿಗರು ಆಲಿಸಿದರು ಈ ಕವಿಯು ಪೇಳುವ
ಕಾವ್ಯದ ಪೆರ್ಮೆಯನು ಪರಿಪರಿಯಲಿ ಪಾಡುತ್ತಾ ಪೊಗಳುವ

ಉನ್ನತೋನ್ನತಿಯ ಸವಿ ಕಂಪು ಬೀರುತಲಿಹರು ಧರೆಯೆಲ್ಲಾ
ಉಣ್ಣಿಸುತಿಹರು ರಸಿಕರಿಗೆ ನವರಸದೂಟವನು ಇಳೆಯಲೆಲ್ಲಾ

ಗುರುವಾರ, ಜೂನ್ 17, 2010

ಸುಶೀಲೆಯ ಸೃಷ್ಟಿ ಶೀಲತೆ

ಸುಶೀಲೆಯ ಸೃಷ್ಟಿ ಶೀಲತೆ
ಕೆ. ಆರ್. ಎಸ್. ಮೂರ್ತಿ

ಪಾಪ ಮಾಡುವ ಆಸೆ, ಕೌಪೀನವ ಬಿಸುಟು ಪೀಪಿ ಊದುವ ಆಸೆ
ತಾಪಸಿಯ ಕೆಣಕಿ ಮೈಮೇಲೇರಿ ಕುಣಿದು ತಣಿಯುವ ಬಹುದಾಸೆ

ಮೇನಕೆಯು ನಾನು, ವಿಶ್ವಕೇ ಮಿತ್ರ ಪ್ರಚಂಡ ಸೃಷ್ಟಿ ಕರ್ತನ ವರಿಸಿ
ಶಕುಂತಲೆಯ ವರಿಸಿದ ಧರಣೀಪತಿ ದುಷ್ಯಂತನಿಗೆ ಮರೆವನ್ನು ತರಿಸಿ

ಬಾಲ ಭರತನ ಧರೆಗೆ ಕೊಡುಗೆಯ ಕೊಡಿಸುವ ಮಹದಾಸೆ ಯೋಜನೆ
ಭರತನ ಹೆಸರು ಅಮರವಾಗಿಸುವ ಖಂಡವನು ಬೆಳೆಸುವ ಆಲೋಚನೆ

ನನ್ನ ಬೃಹದಾಸೆಯನು ತಿಳಿದೇ ಜ್ಞಾನಿ ಒಲಿಯುವನೀ ಘೋರ ತಾಪಸಿ
ಇದೇ ತಪಸ್ಸು ನನ್ನದು ಸುರ ವೃಂದವೇ ಕುಣಿಯುತಿಹರು ನಮ್ಮನು ಹರಸಿ