ಗುರುವಾರ, ಜನವರಿ 20, 2011

ತಿರುಕನ ನನಸು

ತಿರುಕನ ನನಸು
ಕೆ. ಆರ್. ಎಸ್. ಮೂರ್ತಿ

ಪೆದ್ದರಲಿ ಅತಿ ಪೆದ್ದ ದಡ್ಡರಲ್ಲೆಲ್ಲಾ, ಮಹಾ ದಡ್ಡನಾಗಬೇಕೆಂಬ ಅಸಾಮಾನ್ಯ ಬಯಕೆ
ಈ ಕ್ಷಣದಲ್ಲೇ ಸಿಧ್ಧನಾಗಿಹೆ ನಾನು, ಭಾವಿಗೆ ಹಾರಿ ಬಿದ್ದು ಪ್ರಾಣವನ್ನು ತ್ಯಜಿಸುವುದಕೆ

ಸತ್ತು, ಮುಂದಿನ ಜನುಮದಲಿ ಮತ್ತೆ ಆಗುವೆ ಪೆದ್ದೇಶ್ವರ ಚಕ್ರವರ್ತಿ, ಪೆದ್ದ ಗಂಡನಾಗಿ
ಹುಟ್ಟಿ ಮತ್ತೆ ಬರುವ ಮಹದಾಸೆಯಿದೆ; ಸಾಧ್ಯವೇ ಇಲ್ಲವೆನುವುದನು ಸಾಧಿಸುವೆ ದಿಟವಾಗಿ

ಪೆದ್ದನಾದರೇನಂತೆ, ತ್ರಿಪುರ ಸುಂದರಿ, ಅಪ್ರತಿಮ ಜಾಣೆ, ರಾಜ ಕುವರಿಯ ಬಲಗೈ ಹಿಡಿವೆ
ದಡ್ಡನಾದರೇನಂತೆ, ದೊಡ್ಡ ಅರಮನೆಯ ಅಂತಃಪುರದಲಿ ರಾಜಕುವರಿಯೊಡನೆಯೇ ಮಲಗುವೆ

ಫಕ್ಕನೆ ನಗಬೇಡಿ, ಇಂತಹ ಕನಸನು ತಿರುಕನ ಕನಸೆಂದು ಕಿಂಚಿತ್ತೂ ಹೀಯಾಳಿಸಲೇ ಬೇಡಿ
ಅಸಾಧ್ಯವು ಕೂಡ ಆಗಬಲ್ಲುದು, ಮೂರ್ಖನಿಗೂ ಗರವೊಮ್ಮೆ ಬಡಿಯಬಹುದು ಯೋಚಿಸಿನೋಡಿ

ರಾಜನ ಕಟ್ಟಪ್ಪಣೆಯಂತೆ ಧೂತರು ಕುದುರೆಯೇರಿ ಧಾವಿಸಿ ಬರುವಾಗ ಇಡೀ ನಗರದಲ್ಲೇ
ದೊಡ್ಡ ಮೂರ್ಖನನು ಹುಡುಕುತ್ತಿರುವಾಗ ನಾನು ಪ್ರತ್ಯಕ್ಷ ಅದೇ ಕಾಡಿನ ಅವರ ದಾರಿಯಲೇ

ಹತ್ತುವೆನು ಭರದಲ್ಲಿ ಕೈಲಿ ಕೊಡಲಿಯೊಂದನು ಹಿಡಿದು, ಏರುವೆನು ಅತಿ ಎತ್ತರದ ದೊಡ್ಡ ಮರವನ್ನು
ಕೊಂಬೆಯ ತುದಿಗೇರಿ, ಕೊಡಲಿಯ ಹೊಡೆದು ಕೂತ ಕೊಂಬೆಯನೇ ಕತ್ತರಿಸುವ ಯೋಜನೆ ಮಾಡುವೆನು

ಧೂತರಿಗಿಂತ ಪೆದ್ದನಂತೂ ನಾನಲ್ಲ; ಪೋಲೀಸು ಪ್ಯಾದೆಗಳಿಗಿಂತ ಪೆದ್ದರುಂಟೇ ಈ ಲೋಕದಲ್ಲಿ ಹೇಳಿ?
ಬಂಧಿಸಿ ಒಯ್ಯುವುದು ಖಂಡಿತವು ನನ್ನನ್ನು; ಮುಂದಿನ ಕಥೆಯನ್ನು ನೀವೇ ಕೇಳೋಣ ಬೇಗ ಬೇಗ ಹೇಳಿ!

1 ಕಾಮೆಂಟ್‌: