ಶುಕ್ರವಾರ, ಆಗಸ್ಟ್ 6, 2010

ಹೇಡಿಗಳಿಗೊಂದು ಚಾಟಿ

ಹೇಡಿಗಳಿಗೊಂದು ಚಾಟಿ
ಕೆ. ಆರ್. ಎಸ್. ಮೂರ್ತಿ

ಕಣ್ಣು ಬಂದಾಯ್ತೋ ಕುರುಡರಿಗೆಲ್ಲ; ಕಿವುಡರು ಕಿಂಜರಿಯ ಕೇಳುವಂತಾಯ್ತು
ಮೂಕರೆಲ್ಲ ವಾಚಾಳಿಗಳಾದರೋ; ಕುಂಟರೆಲ್ಲಾ ವಾಯುವೇಗದಿ ಓಡಿಯಾಯ್ತು

ನಿಮ್ಮ ಮನಕ್ಕೆ ಮಡಿ ಪೇಟವು ಬಲು ಬಿಗಿಯಾಯ್ತು; ಕಿವಿಗೆ ಹತ್ತಿ ತುಂಬಾಯ್ತು
ಪಿಳಿಪಿಳಿ ಕಣ್ಣಿಗೆ ಕಪ್ಪು ಕನ್ನಡಕದ ಆಭರಣ ನಿಮ್ಮನು ಕುರುಡ ಮಾಡಿಸಿಯಾಯ್ತು

ಎರಡೂ ಕಾಲಿಗೆ ಕಟ್ಟಿದ ದೆಬ್ಬೆ, ಕೈಹಿಂದೆಯಾಗಿ ಕಬ್ಬಿಣದ ಬೇಡಿಯ ಬಳೆ ತೊಟ್ತಾಯ್ತು
ಬಾಯಿಗೆ ಬೀಗವನು ಚಿನ್ನದಲೇ ಮಾಡಿಸಿಕೊಂಡು, ಬೀಗದ ಕೈಯನು ಒಗೆದಾಯ್ತು

ಯಾವ ಜನ್ಮದ ಪಾಪ ಕರ್ಮವೋ! ಈ ಜನ್ಮದ ಸ್ವಕೃತ ಕರ್ಮದ ಫಲವೋ ಗೊತ್ತಿಲ್ಲ
ಅದು ಆಗದು, ಇದಂತೂ ಸಾಗದು, ಆಗದು, ಆಗದು ಎಂದು ಜಪವದೆಕೋ ದಿನವೆಲ್ಲ!

ಇದ್ದಲ್ಲೇ ನರಕವನ್ನು ಭವ್ಯವಾಗಿಯೇ ಕಟ್ಟಿ, ಹೊರಗೆ ಎತ್ತರದ ಕೊಟೆಯೊಂದನು ಕಟ್ಟಿ,
ಆಶೆ, ಆಕಾಂಕ್ಷೆಗಳಿಗೆ ತರ್ಪಣವ ಕೊಟ್ಟು, ಗುರಿ, ಧ್ಯೇಯಗಳನು ಬಲು ದೂರ ಹೊಡೆದಟ್ಟಿ

ನಿಮ್ಮ ಜೈಲಿನಲ್ಲಿ ನೀವೇ ಬಂಧಿಗಳಾಗಿ, ಕಣ್ಣೀರ ಕಾಲುವೆ ಹರಿಸಿ, ಅದರಲ್ಲೇ ಮುಳುಗಿ
ನಿಮ್ಮ ಹಣೆಯ ಬರಹದ ಶಾಸನವ ನೀವೇ ಕಲ್ಲಿನಲ್ಲಿ ಕೆತ್ತಿಸಿ, ದಿನ, ರಾತ್ರಿಎಲ್ಲ ಕೊರಗಿ

ಪರರ ನೋಡಿ, ಹೊಟ್ಟೆಯಲ್ಲಿ ಕಿಚ್ಚನು ಹತ್ತಿಸಿಕೊಂಡು ಸಜೀವ ಚಿತೆಯಲಿ ಬೇಯುವಿರೋ?
ನಿಮ್ಮನ್ನು ನೋಡಿ ಅಳುವವರಾರೂ ಇಲ್ಲವೆಂದು ಅರಿತು ಕೆಟ್ಟ ಕನಸಿನಿಂದ ಏಳುವಿರೋ?

1 ಕಾಮೆಂಟ್‌: